ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳಿಗೆ ಡಬಲ್ ಧಮಾಕಾ; ‘ಪಿನಾಕ’–‘ಬೃಂದಾ ವಿಹಾರಿ’ ಬಿಡುಗಡೆ ದಿನಾಂಕ ಘೋಷಣೆ

1 Min Read
1 Min Read

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳಿಗೆ ಅಕ್ಟೋಬರ್ ತಿಂಗಳು ಡಬಲ್ ಸಂಭ್ರಮ ತರುವಂತಾಗಿದೆ. ಬಹುನಿರೀಕ್ಷಿತ ‘ಪಿನಾಕ’ ಹಾಗೂ ‘ಬೃಂದಾ ವಿಹಾರಿ’ ಚಿತ್ರಗಳ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ.

ಮೊದಲಿಗೆ ‘ಪಿನಾಕ’ ಅಕ್ಟೋಬರ್ 2ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಬಳಿಕ ಕೇವಲ ಎರಡು ವಾರಗಳ ಅಂತರದಲ್ಲಿ ‘ಬೃಂದಾ ವಿಹಾರಿ’ ಅಕ್ಟೋಬರ್ 16ರಂದು ಪ್ರೇಕ್ಷಕರ ಮುಂದೆ ಬರಲಿದೆ. ವಿಶೇಷವೆಂದರೆ, ಇದೇ ಅವಧಿಯಲ್ಲಿ ಬಿಡುಗಡೆಯಾಗಲಿರುವ ರಜನಿಕಾಂತ್ ಅಭಿನಯದ ‘ಜೈಲರ್ 2’ ಚಿತ್ರದೊಂದಿಗೆ ‘ಬೃಂದಾ ವಿಹಾರಿ’ ಬಾಕ್ಸ್ ಆಫೀಸ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ.

ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣದ ‘ಪಿನಾಕ’ ಚಿತ್ರವನ್ನು ನೃತ್ಯ ನಿರ್ದೇಶಕರಿಂದ ನಿರ್ದೇಶಕರಾದ ಧನಂಜಯ ನಿರ್ದೇಶಿಸಿದ್ದಾರೆ. ಇದು ಗಣೇಶ್ ಅವರ ವೃತ್ತಿಜೀವನದ ಅತ್ಯಂತ ದೊಡ್ಡ ಹಾಗೂ ಭಾರೀ ಬಜೆಟ್‌ನ ಚಿತ್ರಗಳಲ್ಲಿ ಒಂದೆಂದು ಹೇಳಲಾಗುತ್ತಿದೆ.

ಚಿತ್ರದಲ್ಲಿ ಗಣೇಶ್ ಇದುವರೆಗೆ ಕಾಣಿಸದ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದು, ಕಥೆಗೆ ತಕ್ಕಂತೆ 500 ವರ್ಷಗಳ ಇತಿಹಾಸ ಹೊಂದಿರುವ ದೇವಗಿರಿ ಸಾಮ್ರಾಜ್ಯದ ಭವ್ಯ ಸೆಟ್‌ನ್ನು ನೆಲಮಂಗಲದ ಸಮೀಪ ಸುಮಾರು ಆರು ಎಕರೆ ಪ್ರದೇಶದಲ್ಲಿ ನಿರ್ಮಿಸಿ ಚಿತ್ರೀಕರಣ ನಡೆಸಲಾಗಿದೆ.

ಒಂದೇ ತಿಂಗಳಲ್ಲಿ ಎರಡು ವಿಭಿನ್ನ ಚಿತ್ರಗಳ ಮೂಲಕ ಗಣೇಶ್ ಪ್ರೇಕ್ಷಕರ ಮುಂದೆ ಬರುತ್ತಿರುವುದರಿಂದ, ಅಕ್ಟೋಬರ್ ತಿಂಗಳು ಅವರ ಅಭಿಮಾನಿಗಳಿಗೆ ವಿಶೇಷವಾಗಲಿದೆ.

Share This Article