ಭದ್ರತೆ, ಆರ್ಥಿಕ ಸಹಕಾರಕ್ಕೆ ಬಿಮ್‌ಸ್ಟೆಕ್ ರಾಷ್ಟ್ರಗಳು ಇನ್ನಷ್ಟು ಒಗ್ಗೂಡಬೇಕು: ಅಜಿತ್ ದೋವಲ್

1 Min Read
1 Min Read

ನವದೆಹಲಿ: ಭದ್ರತೆ ಹಾಗೂ ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಬಿಮ್‌ಸ್ಟೆಕ್ (BIMSTEC) ಸದಸ್ಯ ರಾಷ್ಟ್ರಗಳು ಇನ್ನಷ್ಟು ಸಮನ್ವಯ ಮತ್ತು ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕರೆ ನೀಡಿದ್ದಾರೆ.

ನವದೆಹಲಿಯಲ್ಲಿ ನಡೆದ 5ನೇ ಬಿಮ್‌ಸ್ಟೆಕ್ ರಾಷ್ಟ್ರೀಯ ಭದ್ರತಾ ಮುಖ್ಯಸ್ಥರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಾಗತಿಕ ಪೂರೈಕೆ ಸರಪಳಿ (Global Supply Chain) ವ್ಯತ್ಯಯಗಳಿಂದ ಎಲ್ಲಾ ಸದಸ್ಯ ರಾಷ್ಟ್ರಗಳ ಆರ್ಥಿಕತೆಗೆ ಹೊಡೆತ ಬಿದ್ದಿದೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಬಿಮ್‌ಸ್ಟೆಕ್ ರಾಷ್ಟ್ರಗಳು ಪರಸ್ಪರ ಸಹಕಾರವನ್ನು ಮತ್ತಷ್ಟು ಬಲಪಡಿಸಿ, ಸಾಮೂಹಿಕ ಹಿತಾಸಕ್ತಿಗಾಗಿ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಸಂವಾದದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ದೋವಲ್ ಸಲಹೆ ನೀಡಿದರು.

ಬಿಮ್‌ಸ್ಟೆಕ್ ಸಂಘಟನೆಯು ಹಿಂದೂ ಮಹಾಸಾಗರ ಪ್ರದೇಶದ ಅತ್ಯಂತ ಮಹತ್ವದ ಹಾಗೂ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರಗಳನ್ನು ಒಗ್ಗೂಡಿಸಿದ್ದು, ಸದಸ್ಯ ರಾಷ್ಟ್ರಗಳ ಒಟ್ಟು ಒಟ್ಟು ದೇಶೀಯ ಉತ್ಪನ್ನ (GDP) ಸುಮಾರು 5 ಟ್ರಿಲಿಯನ್ ಅಮೆರಿಕನ್ ಡಾಲರ್ ಆಗಿದೆ ಎಂದು ಅವರು ತಿಳಿಸಿದರು.

ಭಯೋತ್ಪಾದನೆ, ಗಡಿಯಾಚೆಗಿನ ಸಂಘಟಿತ ಅಪರಾಧ, ಸೈಬರ್ ದಾಳಿ ಹಾಗೂ ಸಾಗರ ಭದ್ರತೆ ಸೇರಿದಂತೆ ಹೊಸ ಮತ್ತು ಉದಯೋನ್ಮುಖ ಭದ್ರತಾ ಸವಾಲುಗಳನ್ನು ಎದುರಿಸುವಲ್ಲಿ ಬಿಮ್‌ಸ್ಟೆಕ್ ರಾಷ್ಟ್ರಗಳು ಗಮನಾರ್ಹ ಪ್ರಗತಿ ಸಾಧಿಸಿವೆ ಎಂದು ದೋವಲ್ ಹೇಳಿದರು.

ಇದೇ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಮೂಲಕ ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ ನೀಡುವುದರ ಜೊತೆಗೆ ಹೊಸ ಭದ್ರತಾ ಬೆದರಿಕೆಗಳನ್ನು ಒಗ್ಗೂಡಿ ಎದುರಿಸುವ ಸಾಮರ್ಥ್ಯ ಸದಸ್ಯ ರಾಷ್ಟ್ರಗಳಿಗೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Share This Article