ನವದೆಹಲಿ: ಭಾರತದ ಜೈವಿಕ ಆರ್ಥಿಕತೆ (Bioeconomy) 2030ರ ವೇಳೆಗೆ 300 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯವನ್ನು ತಲುಪುವ ನಿರೀಕ್ಷೆಯಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ನವದೆಹಲಿದಲ್ಲಿ ‘2035ರ ವೇಳೆಗೆ ಭಾರತವನ್ನು ಜಾಗತಿಕ ಜೈವಿಕ ಆರ್ಥಿಕ ಶಕ್ತಿಯಾಗಿ ರೂಪಿಸುವ ಮಾರ್ಗಸೂಚಿ’ (Building India as a Leading Bioeconomy Powerhouse by 2035) ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 21ನೇ ಶತಮಾನವು ಜೈವಿಕ ತಂತ್ರಜ್ಞಾನದ (Biotechnology) ಯುಗವಾಗಿದೆ ಎಂದು ಹೇಳಿದರು.
ದೇಶದಲ್ಲಿ ಬಲಿಷ್ಠ ಜೈವಿಕ ಆರ್ಥಿಕತೆ ನಿರ್ಮಾಣವಾಗುವುದರಿಂದ ಆರೋಗ್ಯ ಮತ್ತು ಆಹಾರ ಭದ್ರತೆ ಮತ್ತಷ್ಟು ಬಲಗೊಳ್ಳಲಿದ್ದು, ಲಸಿಕೆಗಳ ಅಭಿವೃದ್ಧಿಗೆ ವೇಗ, ಉನ್ನತ ಕೌಶಲ್ಯದ ಉದ್ಯೋಗ ಸೃಷ್ಟಿ ಹಾಗೂ ‘ವೋಕಲ್ ಫಾರ್ ಲೋಕಲ್’ ಅಭಿಯಾನಕ್ಕೂ ಉತ್ತೇಜನ ದೊರೆಯಲಿದೆ ಎಂದು ಸಚಿವರು ತಿಳಿಸಿದರು.
ಭಾರತವು ಜೈವಿಕ ತಂತ್ರಜ್ಞಾನಕ್ಕೆ ಮೀಸಲಾದ ‘ಬಯೋಇ3 (BioE3)’ ನೀತಿಯನ್ನು ಹೊಂದಿರುವ ವಿಶ್ವದ ಕೆಲವೇ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.
2014ರಲ್ಲಿ ಭಾರತದ ಜೈವಿಕ ಆರ್ಥಿಕತೆಯ ಮೌಲ್ಯ ಸುಮಾರು 10 ಬಿಲಿಯನ್ ಅಮೆರಿಕನ್ ಡಾಲರ್ ಆಗಿದ್ದರೆ, ಅದು ಈಗ ಸುಮಾರು 195 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಏರಿಕೆಯಾಗಿದೆ ಎಂದು ಜಿತೇಂದ್ರ ಸಿಂಗ್ ಮಾಹಿತಿ ನೀಡಿದರು.
ಈ ಬೆಳವಣಿಗೆಯ ವೇಗವನ್ನು ಗಮನಿಸಿದರೆ, 2030ರ ವೇಳೆಗೆ ಭಾರತದ ಜೈವಿಕ ಆರ್ಥಿಕತೆ 300 ಬಿಲಿಯನ್ ಅಮೆರಿಕನ್ ಡಾಲರ್ ಮಟ್ಟ ತಲುಪಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.


