ಮೋದಿ–ಜಪಾನ್ ಪ್ರಧಾನಿ ಸನಾಏ ಟಕೈಚಿ ಶೃಂಗಸಭೆ ಇಂದು; ಹಲವು ಮಹತ್ವದ ಒಪ್ಪಂದಗಳಿಗೆ ಸಾಧ್ಯತೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಸನಾಏ ಟಕೈಚಿ ಅವರೊಂದಿಗೆ ಇಂದು ನವದೆಹಲಿಯಲ್ಲಿ ವಾರ್ಷಿಕ ಭಾರತ–ಜಪಾನ್ ಶೃಂಗಸಭೆ ನಡೆಸಲಿದ್ದಾರೆ.
ಈ ಶೃಂಗಸಭೆಯಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರದ ವಿವಿಧ ಕ್ಷೇತ್ರಗಳ ಪ್ರಗತಿಯನ್ನು ಪರಿಶೀಲಿಸುವುದರ ಜೊತೆಗೆ, ಪ್ರಾದೇಶಿಕ ಹಾಗೂ ಜಾಗತಿಕ ಮಹತ್ವದ ವಿಷಯಗಳ ಕುರಿತು ಸಮಾಲೋಚನೆ ನಡೆಯಲಿದೆ. ಸಭೆಯ ಬಳಿಕ ಉಭಯ ರಾಷ್ಟ್ರಗಳ ನಡುವೆ ಹಲವು ತಿಳುವಳಿಕೆ ಒಪ್ಪಂದಗಳಿಗೆ (MoUs) ಸಹಿ ಬೀಳುವ ನಿರೀಕ್ಷೆಯಿದೆ.
ಜಪಾನ್ ಪ್ರಧಾನಿ ಸನಾಏ ಟಕೈಚಿ ಅವರು ನಿನ್ನೆ ಸಂಜೆ ಮೂರು ದಿನಗಳ ಭಾರತ ಪ್ರವಾಸಕ್ಕಾಗಿ ನವದೆಹಲಿಗೆ ಆಗಮಿಸಿದ್ದು, ಪ್ರಧಾನಿಯಾಗಿ ಭಾರತಕ್ಕೆ ಇದು ಅವರ ಮೊದಲ ಅಧಿಕೃತ ಭೇಟಿ ಆಗಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಈ ಭೇಟಿ ಭಾರತ–ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಭದ್ರತೆ (Economic Security) ಉಭಯ ರಾಷ್ಟ್ರಗಳ ಸಹಭಾಗಿತ್ವದ ಪ್ರಮುಖ ಆಧಾರವಾಗಿ ಹೊರಹೊಮ್ಮಿದೆ. 2024ರ ನವೆಂಬರ್‌ನಲ್ಲಿ ಟೋಕಿಯೊದಲ್ಲಿ ನಡೆದ ಮೊದಲ ಆರ್ಥಿಕ ಭದ್ರತಾ ಸಂವಾದದಲ್ಲಿ ಸೆಮಿಕಂಡಕ್ಟರ್, ಅಪರೂಪದ ಖನಿಜಗಳು (Critical Minerals), ಔಷಧೋದ್ಯಮ, ಶುದ್ಧ ಇಂಧನ ಹಾಗೂ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಕ್ಷೇತ್ರಗಳನ್ನು ಕಾರ್ಯತಂತ್ರದ ಸಹಕಾರಕ್ಕೆ ಆದ್ಯತೆಯಾಗಿ ಗುರುತಿಸಲಾಗಿತ್ತು.
ಭಾರತ ಮತ್ತು ಜಪಾನ್ ನಡುವಿನ ಸಂಬಂಧವು ನಿರಂತರ ಉನ್ನತ ಮಟ್ಟದ ರಾಜಕೀಯ ಸಂಪರ್ಕಗಳಿಂದ ಮತ್ತಷ್ಟು ಬಲಗೊಂಡಿದೆ. ಇತ್ತೀಚೆಗೆ ಫ್ರಾನ್ಸ್‌ನಲ್ಲಿ ನಡೆದ ಜಿ-7 ಶೃಂಗಸಭೆ ವೇಳೆ ಪ್ರಧಾನಿ ಮೋದಿ ಮತ್ತು ಟಕೈಚಿ ಭೇಟಿಯಾಗಿ ಮಾತುಕತೆ ನಡೆಸಿದ್ದರು.
2025ರ ವಾರ್ಷಿಕ ಶೃಂಗಸಭೆಯಲ್ಲಿ ಘೋಷಿಸಲಾದ ಭಾರತ–ಜಪಾನ್ ಮಾನವ ಸಂಪನ್ಮೂಲ ವಿನಿಮಯ ಮತ್ತು ಸಹಕಾರ ಕಾರ್ಯಯೋಜನೆಯಡಿ ಐದು ವರ್ಷಗಳಲ್ಲಿ ಉಭಯ ದೇಶಗಳ ನಡುವೆ 5 ಲಕ್ಷ ಜನರ ವಿನಿಮಯ ಗುರಿ ಹೊಂದಲಾಗಿದ್ದು, ಇದರಲ್ಲಿ ಭಾರತದಿಂದ 50 ಸಾವಿರ ಕೌಶಲ್ಯಯುತ ಮತ್ತು ಅರೆಕೌಶಲ್ಯ ಉದ್ಯೋಗಿಗಳ ಜಪಾನ್‌ಗೆ ನಿಯೋಜನೆ ಕೂಡ ಸೇರಿದೆ.
ವಾರ್ಷಿಕ ಶೃಂಗಸಭೆಯ ಜೊತೆಗೆ ವಿದೇಶಾಂಗ ಸಚಿವರು, ರಕ್ಷಣಾ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರು ಹಾಗೂ ಹಿರಿಯ ಅಧಿಕಾರಿಗಳ ಮಟ್ಟದಲ್ಲಿಯೂ ಉಭಯ ರಾಷ್ಟ್ರಗಳ ನಡುವೆ ನಿಯಮಿತವಾಗಿ ಮಾತುಕತೆಗಳು ನಡೆಯುತ್ತಿವೆ.


