ಉತ್ತರಾಖಂಡದಲ್ಲಿ ಮದರಸಾ ಮಂಡಳಿಗೆ ವಿದಾಯ; ಅಲ್ಪಸಂಖ್ಯಾತ ಶಿಕ್ಷಣ ಪ್ರಾಧಿಕಾರಕ್ಕೆ ಅಧಿಕೃತ ಚಾಲನೆ

2 Min Read
2 Min Read

ಮದರಸಾ ಮಂಡಳಿಗೆ ಬದಲಾಗಿ ಉತ್ತರಾಖಂಡ ಅಲ್ಪಸಂಖ್ಯಾತ ಶಿಕ್ಷಣ ಪ್ರಾಧಿಕಾರ ಅಸ್ತಿತ್ವಕ್ಕೆ; 456 ಮದರಸಾಗಳು ಹೊಸ ವ್ಯವಸ್ಥೆಯಡಿ

ಉತ್ತರಾಖಂಡದಲ್ಲಿ ಮದರಸಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಚಾಲನೆ ದೊರೆತಿದ್ದು, ಇಂದಿನಿಂದ ಉತ್ತರಾಖಂಡ ಅಲ್ಪಸಂಖ್ಯಾತ ಶಿಕ್ಷಣ ಪ್ರಾಧಿಕಾರ (Uttarakhand Minority Education Authority) ಅಧಿಕೃತವಾಗಿ ಕಾರ್ಯಾರಂಭ ಮಾಡಿದೆ. ಈ ಮೂಲಕ ರಾಜ್ಯದ ಮದರಸಾ ಮಂಡಳಿ ರದ್ದುಗೊಂಡಿದ್ದು, ರಾಜ್ಯದ 456 ಮದರಸಾಗಳು ಹೊಸ ಪ್ರಾಧಿಕಾರದ ವ್ಯಾಪ್ತಿಗೆ ಬಂದಿವೆ. ಇವುಗಳ ಮೇಲ್ವಿಚಾರಣೆಯನ್ನು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಜಂಟಿಯಾಗಿ ನಡೆಸಲಿವೆ.

ರಾಜ್ಯ ಸರ್ಕಾರ ಶಿಕ್ಷಣ ವ್ಯವಸ್ಥೆಯನ್ನು ಹೆಚ್ಚು ಆಧುನಿಕ, ಪಾರದರ್ಶಕ ಮತ್ತು ಸಮಗ್ರಗೊಳಿಸುವ ಉದ್ದೇಶದಿಂದ ಈ ಮಹತ್ವದ ಕ್ರಮ ಕೈಗೊಂಡಿದೆ.

ರಾಜ್ಯದ ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಖಜಾನ್ ದಾಸ್ ಮಾತನಾಡಿ, ರಾಜ್ಯದಲ್ಲಿರುವ ಎಲ್ಲಾ ಮಾನ್ಯತೆ ಪಡೆದ ಮದರಸಾಗಳು ಇನ್ನು ಮುಂದೆ ಉತ್ತರಾಖಂಡ ಅಲ್ಪಸಂಖ್ಯಾತ ಶಿಕ್ಷಣ ಪ್ರಾಧಿಕಾರದ ಅಧೀನದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು. ಅಲ್ಲದೆ, ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ಮಾನದಂಡಗಳಿಗೆ ಅನುಗುಣವಾದ ಶಿಕ್ಷಣ ದೊರಕುವಂತೆ ಈ ಸಂಸ್ಥೆಗಳನ್ನು ಉತ್ತರಾಖಂಡ ಶಾಲಾ ಶಿಕ್ಷಣ ಮಂಡಳಿಗೆ ಸಂಯೋಜಿಸಲಾಗುತ್ತದೆ ಎಂದರು.

ಈ ಹೊಸ ವ್ಯವಸ್ಥೆ ಮುಸ್ಲಿಂ ಸಮುದಾಯದ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗದೆ, ಸಿಖ್, ಜೈನ, ಬೌದ್ಧ, ಕ್ರೈಸ್ತ ಹಾಗೂ ಪಾರ್ಸಿ ಅಲ್ಪಸಂಖ್ಯಾತ ಸಮುದಾಯಗಳ ಶಿಕ್ಷಣ ಸಂಸ್ಥೆಗಳಿಗೂ ಸಮಾನವಾಗಿ ಅನ್ವಯವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯದ ಎಲ್ಲಾ ಮದರಸಾಗಳಿಗೂ ಯುಡೈಸ್ (UDISE) ಸಂಖ್ಯೆ ನೀಡಲಾಗಿದ್ದು, ಅವುಗಳ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಮಾಹಿತಿಯನ್ನು ಕೇಂದ್ರ ಶಿಕ್ಷಣ ಸಚಿವಾಲಯದ ಡಿಜಿಟಲ್ ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತದೆ. ಸರ್ಕಾರ ನಿಗದಿಪಡಿಸಿರುವ ಮಾನದಂಡಗಳನ್ನು ಪಾಲಿಸುವ ಶಿಕ್ಷಣ ಸಂಸ್ಥೆಗಳಿಗಷ್ಟೇ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ದೊರೆಯಲಿದೆ.

ಹೊಸ ಪ್ರಾಧಿಕಾರದ ನಿಯಮಾವಳಿಯಂತೆ, ಎಲ್ಲಾ ಮದರಸಾಗಳಿಗೆ ಮಾನ್ಯತೆ ಕಡ್ಡಾಯವಾಗಿದೆ. ಪ್ರಥಮದಿಂದ 8ನೇ ತರಗತಿವರೆಗೆ ಶಿಕ್ಷಣ ನೀಡುತ್ತಿರುವ 400 ಮದರಸಾಗಳು ಜಿಲ್ಲಾ ಮುಖ್ಯ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಮಾನ್ಯತೆ ಪಡೆಯಬೇಕಿದೆ. 12ನೇ ತರಗತಿವರೆಗೆ ಶಿಕ್ಷಣ ನೀಡುತ್ತಿರುವ 56 ಮದರಸಾಗಳು ಉತ್ತರಾಖಂಡ ಶಾಲಾ ಶಿಕ್ಷಣ ಮಂಡಳಿಗೆ ಸಂಯೋಜನೆಯಾಗಲಿವೆ. ಈ ಸಂಪೂರ್ಣ ಪ್ರಕ್ರಿಯೆ ಆನ್‌ಲೈನ್ ಮೂಲಕ ನಡೆಯಲಿದೆ.

ಈವರೆಗೆ 137 ಮದರಸಾಗಳು ಪ್ರಾಧಿಕಾರದ ಪೋರ್ಟಲ್ ಮೂಲಕ ಮಾನ್ಯತೆಗೆ ಅರ್ಜಿ ಸಲ್ಲಿಸಿವೆ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಮುಖ್ಯವಾಹಿನಿಗೆ ತಂದು, ಗುಣಮಟ್ಟದ ಹಾಗೂ ಆಧುನಿಕ ಶಿಕ್ಷಣವನ್ನು ಉತ್ತೇಜಿಸುವುದೇ ಈ ಹೊಸ ಪ್ರಾಧಿಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಸರ್ಕಾರ ತಿಳಿಸಿದೆ.

Share This Article
Leave a Comment