ಸಮಾಜವನ್ನು ಕಾಡುತ್ತಿರುವ ಮೊಬೈಲ್ ವ್ಯಸನದ ಕಥೆ ಹೇಳಲಿದೆ ‘ಸರ್ವಾಂತಾರ್ಯಾಮಿ’

1 Min Read
1 Min Read

ಮೊಬೈಲ್ ವ್ಯಸನದ ಸಾಮಾಜಿಕ ಪರಿಣಾಮಗಳ ಮೇಲೆ ಬೆಳಕು ಚೆಲ್ಲುವ ‘ಸರ್ವಾಂತಾರ್ಯಾಮಿ’; ಜುಲೈ 17ಕ್ಕೆ ತೆರೆಗೆ

ಇತ್ತೀಚಿನ ದಿನಗಳಲ್ಲಿ ಸಮಾಜವನ್ನು ಕಾಡುತ್ತಿರುವ ಮೊಬೈಲ್ ವ್ಯಸನ ಮತ್ತು ಅದರ ದುಷ್ಪರಿಣಾಮಗಳನ್ನು ಕಥಾವಸ್ತುವಾಗಿಸಿಕೊಂಡಿರುವ ‘ಸರ್ವಾಂತಾರ್ಯಾಮಿ’ ಚಿತ್ರ ಜುಲೈ 17ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ರಂಗಸ್ವಾಮಿ ಕಪನಿಪಾಳ್ಯ ನಿರ್ದೇಶಿಸಿರುವ ಈ ಚಿತ್ರವನ್ನು ಹಿತಾ ಆರ್. ಗೌಡ ನಿರ್ಮಿಸಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟ್ರೈಲರ್, ಮೊಬೈಲ್ ಫೋನ್‌ಗಳ ಅತಿಯಾದ ಬಳಕೆ ವ್ಯಕ್ತಿ, ಕುಟುಂಬ ಹಾಗೂ ಸಮಾಜದ ಮೇಲೆ ಬೀರುವ ಪರಿಣಾಮಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಿದೆ.

ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ರಂಗಸ್ವಾಮಿ ಕಪನಿಪಾಳ್ಯ, “ಚಿತ್ರಗಳಿಗೆ ಸೆನ್ಸಾರ್ ಇದೆ. ಆದರೆ ಮೊಬೈಲ್ ಬಳಕೆಗೆ ಯಾವುದೇ ನಿಯಂತ್ರಣವಿಲ್ಲ. ನಿಜವಾದ ಅಪಾಯ ಅಲ್ಲೇ ಅಡಗಿದೆ. ಮಕ್ಕಳು ಮಾತ್ರವಲ್ಲ, ದೊಡ್ಡವರ ಜೀವನದ ಮೇಲೂ ಮೊಬೈಲ್ ವ್ಯಸನ ಗಂಭೀರ ಪರಿಣಾಮ ಬೀರುತ್ತಿದೆ. ಕೆಲವು ಕುಟುಂಬಗಳು ಈಗಾಗಲೇ ಸ್ಕ್ರೀನ್ ಟೈಮ್ ಕಡಿಮೆ ಮಾಡುವುದು ಅಥವಾ ಮತ್ತೆ ಕೀಪ್ಯಾಡ್ ಫೋನ್‌ಗಳತ್ತ ಮರಳುವ ಪ್ರಯತ್ನ ಆರಂಭಿಸಿವೆ. ಇದೇ ವಿಚಾರವನ್ನು ಸಿನಿಮಾ ಮೂಲಕ ಹೇಳುತ್ತಿದ್ದೇವೆ,” ಎಂದರು.

ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಆಟೋ ನಾಗರಾಜ್, ತಮ್ಮ 65ನೇ ಚಿತ್ರವಾಗಿರುವ ‘ಸರ್ವಾಂತಾರ್ಯಾಮಿ’ಯಲ್ಲಿ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಇದು ಮೊಬೈಲ್ ವ್ಯಸನದ ಕಥೆಯಷ್ಟೇ ಅಲ್ಲ, ತಂದೆ–ಮಗಳ ಭಾವನಾತ್ಮಕ ಸಂಬಂಧವನ್ನೂ ಒಳಗೊಂಡಿರುವ ಚಿತ್ರ,” ಎಂದು ಅವರು ಹೇಳಿದರು.

ಚಿತ್ರದಲ್ಲಿ ತೇಜಸ್ವಿನಿ, ಮೈರಾ, ಅಮೂಲ್ಯ ನಾರಾಯಣ, ಸೂರ್ಯ ಪ್ರವೀಣ್, ಸಂಜನಾ, ಉಮೇಶ್ ಸಕ್ಕರೆನಾಡು, ಉಮೇಶ್ ಪುಂಗ, ಪೃಥ್ವಿರಾಜ್, ನಾಗೇಶ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರಕ್ಕೆ ರಮೇಶ್ ಕೃಷ್ಣಪ್ಪ ಸಂಗೀತ ಸಂಯೋಜಿಸಿದ್ದು, ರಾಜು ಹೆಮ್ಮಿಗೆಪುರ ಛಾಯಾಗ್ರಹಣ ಹಾಗೂ ದೀಪು ಎಸ್. ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ನಿರ್ದೇಶಕ ಹಾಗೂ ಗೀತರಚನೆಕಾರ ಕೆ. ರಾಮ್ ನಾರಾಯಣ್ ಚಿತ್ರದ ತಂಡಕ್ಕೆ ಬೆಂಬಲ ನೀಡಿದ್ದಾರೆ.

Share This Article