ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನೆದರ್‌ಲ್ಯಾಂಡ್ಸ್‌ನ ರಾಣಿ ಮ್ಯಾಕ್ಸಿಮಾ ಅವರನ್ನು ಭೇಟಿ ಮಾಡಿ, ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (Digital Public Infrastructure – DPI) ಆಧಾರಿತ ಪರಿವರ್ತನೆ ಹಾಗೂ ಆರ್ಥಿಕ ಒಳಗೊಳ್ಳುವಿಕೆ ಕುರಿತು ಮಹತ್ವದ ಚರ್ಚೆ ನಡೆಸಿದರು.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿಯ ಆರ್ಥಿಕ ಆರೋಗ್ಯದ ವಿಶೇಷ ಪ್ರತಿನಿಧಿ (UNSGSA) ಆಗಿಯೂ ಕಾರ್ಯನಿರ್ವಹಿಸುತ್ತಿರುವ ರಾಣಿ ಮ್ಯಾಕ್ಸಿಮಾ ಅವರನ್ನು ಭೇಟಿಯಾಗಿರುವುದು ಸಂತಸದ ಸಂಗತಿ ಎಂದು ಹೇಳಿದ್ದಾರೆ. ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಹಣಕಾಸು ಸೇವೆಗಳನ್ನು ಹೆಚ್ಚು ಸುಲಭ, ಕೈಗೆಟುಕುವ ಹಾಗೂ ಎಲ್ಲರಿಗೂ ಲಭ್ಯವಾಗುವಂತೆ ಮಾಡಿದ್ದು, ಜನರ ಜೀವನಮಟ್ಟ ಸುಧಾರಿಸಲು ಮಹತ್ವದ ಪಾತ್ರ ವಹಿಸಿದೆ ಎಂದು ಅವರು ತಿಳಿಸಿದ್ದಾರೆ.
ಭಾರತದ ಈ ಯಶಸ್ವಿ ಅನುಭವವನ್ನು ವಿಶ್ವದ ಪಾಲುದಾರ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳುವ ಬದ್ಧತೆ ಭಾರತಕ್ಕಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ವಿದೇಶಾಂಗ ಸಚಿವಾಲಯದ ಪ್ರಕಾರ, ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿಯ ಆರ್ಥಿಕ ಆರೋಗ್ಯದ ವಿಶೇಷ ಪ್ರತಿನಿಧಿಯಾಗಿ ರಾಣಿ ಮ್ಯಾಕ್ಸಿಮಾ ಭಾರತಕ್ಕೆ ಭೇಟಿ ನೀಡಿದ್ದು, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಮೂಲಕ ಸಮಗ್ರ ಅಭಿವೃದ್ಧಿ ಮತ್ತು ಆರ್ಥಿಕ ಒಳಗೊಳ್ಳುವಿಕೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಈ ಭೇಟಿ ಪ್ರತಿಬಿಂಬಿಸುತ್ತದೆ.
ಭಾರತ ಪ್ರವಾಸದ ವೇಳೆ ರಾಣಿ ಮ್ಯಾಕ್ಸಿಮಾ ವಿವಿಧ ವರ್ಗಗಳ ಜನರನ್ನು ಭೇಟಿ ಮಾಡಿ, ಬ್ಯಾಂಕಿಂಗ್ ಹಾಗೂ ಹಣಕಾಸು ಸೇವೆಗಳ ಬಳಕೆಯ ಅನುಭವ ಮತ್ತು ಆರ್ಥಿಕ ಸಬಲೀಕರಣಕ್ಕೆ ಸಂಬಂಧಿಸಿದ ಸವಾಲುಗಳ ಬಗ್ಗೆ ಮಾಹಿತಿ ಪಡೆದರು. ಜೊತೆಗೆ, ಪ್ರಧಾನಮಂತ್ರಿ ಜನಧನ್ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ, ದೇಶದಲ್ಲಿ ಹಣಕಾಸು ಸೇವೆಗಳ ವಿಸ್ತರಣೆಯ ಪರಿಣಾಮವನ್ನು ಅವಲೋಕಿಸಿದರು.


