ನವದೆಹಲಿ: ದೇಶಾದ್ಯಂತ ಇಂದು 78ನೇ ರಾಷ್ಟ್ರೀಯ ಚಾರ್ಟರ್ಡ್ ಅಕೌಂಟೆಂಟ್ (CA) ದಿನವನ್ನು ಆಚರಿಸಲಾಗುತ್ತಿದೆ. 1949ರ ಜುಲೈ 1ರಂದು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಸ್ಥಾಪನೆಯಾದ ದಿನದ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ. ದೇಶದ ಆರ್ಥಿಕ ಪಾರದರ್ಶಕತೆ, ಕಾರ್ಪೊರೇಟ್ ಆಡಳಿತ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ಗಳ ಮಹತ್ವದ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗುತ್ತಿದೆ.
ಈ ಅಂಗವಾಗಿ ಇಂದು ಮಧ್ಯಾಹ್ನ 3.30ಕ್ಕೆ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ 78ನೇ ಸಿಎ ದಿನಾಚರಣೆ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ICAI ಅಧ್ಯಕ್ಷ ಪ್ರಸನ್ನ ಕುಮಾರ್ ಡಿ ಹಾಗೂ ಉಪಾಧ್ಯಕ್ಷ ಮಂಗೇಶ್ ಕಿನಾರೆ ಉಪಸ್ಥಿತರಿರಲಿದ್ದಾರೆ.
ರಾಷ್ಟ್ರೀಯ ಚಾರ್ಟರ್ಡ್ ಅಕೌಂಟೆಂಟ್ ದಿನದ ಅಂಗವಾಗಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಸಿಎ ಸಮುದಾಯಕ್ಕೆ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಅವರು, “ಭಾರತದ ಆರ್ಥಿಕ ಪ್ರಗತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತಮ್ಮ ಪ್ರಾಮಾಣಿಕತೆ ಮತ್ತು ವೃತ್ತಿಪರತೆಯ ಮೂಲಕ ಅವರು ಹಣಕಾಸು ವ್ಯವಸ್ಥೆಯನ್ನು ಬಲಪಡಿಸಿ, ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿ, ಉದ್ಯಮಗಳ ಬೆಳವಣಿಗೆಗೆ ನೆರವಾಗುತ್ತಿದ್ದಾರೆ” ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಚಾರ್ಟರ್ಡ್ ಅಕೌಂಟೆಂಟ್ ಸಮುದಾಯಕ್ಕೆ ಶುಭಾಶಯ ಸಲ್ಲಿಸಿದ್ದಾರೆ. “ಭಾರತದ ಆರ್ಥಿಕ ಪಯಣದಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ಗಳು ವಿಶ್ವಾಸಾರ್ಹ ಪಾಲುದಾರರಾಗಿದ್ದಾರೆ. ಪಾರದರ್ಶಕತೆ, ವೃತ್ತಿಪರ ಶ್ರೇಷ್ಠತೆ ಹಾಗೂ ಹಣಕಾಸು ಶಿಸ್ತು ಮೂಲಕ ಅವರು ಉದ್ಯಮ, ಹೂಡಿಕೆ ಮತ್ತು ಉದ್ಯಮಶೀಲತೆಗೆ ಬಲ ತುಂಬುತ್ತಿದ್ದಾರೆ. ವಿಕಸಿತ ಭಾರತದ ನಿರ್ಮಾಣದಲ್ಲಿ ಅವರ ಪಾತ್ರ ಅತ್ಯಂತ ಪ್ರಮುಖವಾಗಿದೆ” ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಸಿಎ ಸಮುದಾಯಕ್ಕೆ ಅಭಿನಂದನೆ ಸಲ್ಲಿಸಿದ್ದು, “ಚಾರ್ಟರ್ಡ್ ಅಕೌಂಟೆಂಟ್‌ಗಳು ವ್ಯಕ್ತಿಗಳು ಹಾಗೂ ಉದ್ಯಮ ಸಂಸ್ಥೆಗಳ ಹಣಕಾಸು ಕಾರ್ಯಕ್ಷಮತೆ ಮತ್ತು ಕಾನೂನುಬದ್ಧ ಅನುಸರಣೆಯನ್ನು ಬಲಪಡಿಸುವ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ” ಎಂದು ಹೇಳಿದ್ದಾರೆ.


