ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-UG) 2026ರ ಮರುಪರೀಕ್ಷೆಯನ್ನು ಸುರಕ್ಷಿತ ಹಾಗೂ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಟೆಲಿಗ್ರಾಂ ಸಂದೇಶ ವಿನಿಮಯ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಯ ಪ್ರವೇಶವನ್ನು ಜೂನ್ 22ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಿದೆ.
ಜೂನ್ 21ರಂದು ನಡೆಯಲಿರುವ NEET-UG ಮರುಪರೀಕ್ಷೆಯ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಈ ಕ್ರಮ ಕೈಗೊಂಡಿದ್ದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಇದನ್ನು ಸ್ವಾಗತಿಸಿದೆ.
ಎನ್‌ಟಿಎ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ನಿರ್ಬಂಧವು ಮರುಪರೀಕ್ಷೆ ನಡೆಯುವ ದಿನ ಹಾಗೂ ಅದರ ತಕ್ಷಣದ ಅವಧಿಗೆ ಅನ್ವಯವಾಗಲಿದೆ. ಜೊತೆಗೆ, ಟೆಲಿಗ್ರಾಂನಲ್ಲಿ ಈಗಾಗಲೇ ಪ್ರಕಟವಾಗಿರುವ ಸಂದೇಶಗಳನ್ನು ಸಂಪಾದಿಸುವ (Edit) ಸೌಲಭ್ಯವನ್ನು ಜೂನ್ 30ರವರೆಗೆ ನಿಷ್ಕ್ರಿಯಗೊಳಿಸಲು ವೇದಿಕೆಗೆ ಸೂಚಿಸಲಾಗಿದೆ.
ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರ ಸೋರಿಕೆಯಾಗಿದೆ ಎಂಬ ಸುಳ್ಳು ಅಥವಾ ಕೃತಕ ಮಾಹಿತಿಗಳನ್ನು ನಂತರದ ಹಂತದಲ್ಲಿ ಸೃಷ್ಟಿಸಲು ಈ ವೈಶಿಷ್ಟ್ಯವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎನ್‌ಟಿಎ ತಿಳಿಸಿದೆ.
ಮರುಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳನ್ನು ವಂಚಿಸಲು ಕೆಲ ಅಕ್ರಮ ಜಾಲಗಳು ಟೆಲಿಗ್ರಾಂ ವೇದಿಕೆಯನ್ನು ಸಂಘಟಿತವಾಗಿ ಬಳಸುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಮತ್ತು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡಲು ಹಾಗೂ ಪರೀಕ್ಷೆಯನ್ನು ನ್ಯಾಯಸಮ್ಮತವಾಗಿ ನಡೆಸಲು ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಂಡಿರುವ MeitYಗೆ ಎನ್‌ಟಿಎ ಕೃತಜ್ಞತೆ ಸಲ್ಲಿಸಿದೆ.


