ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಭೆ; ದೇವಾಲಯ ಆಡಳಿತ ಬಲಪಡಿಸಲು ಹಲವು ತೀರ್ಮಾನಗಳು

1 Min Read
1 Min Read

ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಭೆ ಗುರುವಾರ ನಡೆಯಿತು. ಸಭೆಯಲ್ಲಿ ದೇವಾಲಯದ ಆಡಳಿತ, ದೇಣಿಗೆ ನಿರ್ವಹಣಾ ವ್ಯವಸ್ಥೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ನೇಮಕ, ಟ್ರಸ್ಟ್‌ನ ಖಾಲಿ ಹುದ್ದೆಗಳ ಭರ್ತಿ ಹಾಗೂ ಧಾರ್ಮಿಕ ಸಮಿತಿಯ ಪುನರ್‌ರಚನೆ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ಸಭೆಯ ಬಳಿಕ ಟ್ರಸ್ಟ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ರಾಮಮಂದಿರದ ಮೇಲಿನ ಭಕ್ತರ ನಂಬಿಕೆ ಅಚಲವಾಗಿದ್ದು, ಪ್ರತಿದಿನ ದೇವಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆಯೂ ಸ್ಥಿರವಾಗಿದೆ ಎಂದು ತಿಳಿಸಿದೆ.

ಇದೇ ವೇಳೆ, ವಿಶೇಷ ತನಿಖಾ ತಂಡದ (SIT) ಅಂತಿಮ ವರದಿ ಇನ್ನೂ ಟ್ರಸ್ಟ್‌ಗೆ ಸಲ್ಲಿಕೆಯಾಗಿಲ್ಲ. ಹೀಗಾಗಿ ಈ ವಿಷಯದ ಕುರಿತು ಸಭೆಯಲ್ಲಿ ಯಾವುದೇ ಚರ್ಚೆ ನಡೆಸಲಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ದೇವಾಲಯಕ್ಕೆ ಕಾಣಿಕೆಯಾಗಿ ಸಲ್ಲಿಕೆಯಾಗುವ ಚಿನ್ನ ಮತ್ತು ಬೆಳ್ಳಿಯ ಪ್ರಮಾಣ ಹಾಗೂ ಶುದ್ಧತೆಯನ್ನು ವೈಜ್ಞಾನಿಕವಾಗಿ ಪರಿಶೀಲಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧೀನದಲ್ಲಿರುವ ಇಂಡಿಯಾ ಗವರ್ನ್ಮೆಂಟ್ ಮಿಂಟ್ (India Government Mint) ಸಹಯೋಗದಲ್ಲಿ ಶಾಶ್ವತ ವ್ಯವಸ್ಥೆ ಕಲ್ಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಇದರ ಜೊತೆಗೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಜೊತೆ ಮಾಡಿಕೊಳ್ಳಲಿರುವ ಒಪ್ಪಂದ ಪತ್ರ (MoU) ಹಾಗೂ ಬ್ಯಾಂಕ್‌ನ ಜವಾಬ್ದಾರಿಗಳ ಕುರಿತು ಸಭೆಯಲ್ಲಿ ಸವಿಸ್ತಾರವಾಗಿ ಚರ್ಚಿಸಲಾಯಿತು ಎಂದು ಟ್ರಸ್ಟ್ ತಿಳಿಸಿದೆ.

Share This Article