ನವದೆಹಲಿ: ದೆಹಲಿ ಸರ್ಕಾರದ ಮಹತ್ವಾಕಾಂಕ್ಷೆಯ ‘ಲಕ್ಷ್ಮೀ ಯೋಜನೆ’ ಅಡಿ ಅರ್ಹತೆ ಪಡೆದಿರುವ 4 ಸಾವಿರ ಮಹಿಳಾ ಫಲಾನುಭವಿಗಳಿಗೆ ಇಂದು ಅನುಮೋದನಾ ಪತ್ರಗಳನ್ನು ವಿತರಿಸಲಾಗುತ್ತಿದೆ. ಯೋಜನೆಯಡಿ ಅರ್ಹ ಮಹಿಳೆಯರಿಗೆ ಪ್ರತಿ ತಿಂಗಳು ₹2,500 ಆರ್ಥಿಕ ನೆರವು ನೀಡಲಾಗುತ್ತದೆ.
ಈ ಯೋಜನೆಗೆ ಇದುವರೆಗೆ 9.13 ಲಕ್ಷಕ್ಕೂ ಹೆಚ್ಚು ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 6.52 ಲಕ್ಷಕ್ಕೂ ಅಧಿಕ ಅರ್ಜಿಗಳು ಅಂತಿಮವಾಗಿ ಸಲ್ಲಿಕೆಯಾಗಿವೆ ಎಂದು ದೆಹಲಿ ಸರ್ಕಾರ ತಿಳಿಸಿದೆ.
ಯೋಜನೆಯಡಿ ಅರ್ಹ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಮುಂದಿನ ತಿಂಗಳ 1ರಿಂದ ನೇರವಾಗಿ ಆರ್ಥಿಕ ನೆರವು ಜಮೆಯಾಗಲಿದೆ. ಮಹಿಳೆಯರಿಗೆ ಆರ್ಥಿಕ ಭದ್ರತೆ ಒದಗಿಸುವುದು ಹಾಗೂ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
2026–27ನೇ ಸಾಲಿನ ದೆಹಲಿ ಬಜೆಟ್‌ನಲ್ಲಿ ‘ಲಕ್ಷ್ಮೀ ಯೋಜನೆ’ಗಾಗಿ ₹5,110 ಕೋಟಿ ಅನುದಾನ ಮೀಸಲಿಡಲಾಗಿದೆ. ಯೋಜನೆಯ ಪ್ರಯೋಜನ ಪಡೆಯಲು ಅರ್ಹ ಮಹಿಳೆಯರು ತಮ್ಮ ಆನ್‌ಲೈನ್ ನೋಂದಣಿ ಪ್ರಕ್ರಿಯೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ದೆಹಲಿ ಸರ್ಕಾರ ಮನವಿ ಮಾಡಿದೆ.
ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡುವ ಈ ಯೋಜನೆಯ ಮೂಲಕ ಕುಟುಂಬದ ಆರ್ಥಿಕ ಸ್ಥಿರತೆ ಹೆಚ್ಚಿಸುವ ಜೊತೆಗೆ ಮಹಿಳೆಯರಲ್ಲಿ ಸ್ವಾವಲಂಬನೆಯ ಮನೋಭಾವ ಬೆಳೆಸುವ ಗುರಿಯನ್ನು ಸರ್ಕಾರ ಹೊಂದಿದೆ.


