ಸಂಸತ್ ಕಲಾಪ ಸುಗಮವಾಗಿ ನಡೆಸಿ: ಸಂಸದರಿಗೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಮನವಿ
ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಎಲ್ಲಾ ಸಂಸದರಿಗೆ ಸಹಕಾರದ ಮನೋಭಾವದಿಂದ ಕಲಾಪದಲ್ಲಿ ಭಾಗವಹಿಸಿ, ಸಂಸತ್ತಿನ ಗೌರವವನ್ನು ಎತ್ತಿಹಿಡಿಯುವಂತೆ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಸಂವಿಧಾನದ ಮೌಲ್ಯಗಳು, ಸಂಸದೀಯ ಸಂಪ್ರದಾಯಗಳು ಹಾಗೂ ಸದನದ ಶಿಸ್ತು-ಗೌರವವನ್ನು ಕಾಪಾಡಿಕೊಂಡು ಎಲ್ಲ ಸದಸ್ಯರು ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಸತ್ತಿನ ಶಾಸನಾತ್ಮಕ ಕಾರ್ಯಗಳು ಹಾಗೂ ಇತರ ಮಹತ್ವದ ವ್ಯವಹಾರಗಳನ್ನು ಸುಗಮವಾಗಿ ಮತ್ತು ಪರಿಣಾಮಕಾರಿಯಾಗಿ ಪೂರ್ಣಗೊಳಿಸುವುದು ಎಲ್ಲ ಸದಸ್ಯರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಓಂ ಬಿರ್ಲಾ ಹೇಳಿದ್ದಾರೆ.
ಇದರಿಂದ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ಜನರ ವಿಶ್ವಾಸ ಮತ್ತಷ್ಟು ಬಲಗೊಳ್ಳಲಿದ್ದು, ಸಂಸತ್ತಿನ ಘನತೆ ಮತ್ತು ವಿಶ್ವಾಸಾರ್ಹತೆ ಹೆಚ್ಚಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅರ್ಥಪೂರ್ಣ ಚರ್ಚೆಗಳು, ಜನಪರ ನಿರ್ಧಾರಗಳು ಹಾಗೂ ಸಂಸತ್ತಿನ ಘನತೆಗೆ ತಕ್ಕ ರೀತಿಯ ಕಲಾಪ ನಡೆಸಲು ಎಲ್ಲ ಸಂಸದರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಲೋಕಸಭಾಧ್ಯಕ್ಷರು ಮನವಿ ಮಾಡಿದ್ದಾರೆ.


