ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಸಮುದ್ರ ಭದ್ರತೆ ಕುರಿತ ಆತಂಕಗಳು ಹೆಚ್ಚುತ್ತಿರುವ ಹಿನ್ನೆಲೆ, ವಿಶೇಷವಾಗಿ ಹೋರ್ಮುಜ್ ಜಲಸಂಧಿಯಲ್ಲಿ (Strait of Hormuz) ಎರಡು ವ್ಯಾಪಾರ ಹಡಗುಗಳ ಮೇಲೆ ನಡೆದ ದಾಳಿಯ ಬಳಿಕ, ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ನಾವಿಕರ ಸುರಕ್ಷತೆ ಮತ್ತು ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ‘ಸೀಫೇರರ್-ಫಸ್ಟ್’ (Seafarer-First) ಎಂಬ ವಿಶೇಷ ಉಪಕ್ರಮಕ್ಕೆ ಚಾಲನೆ ನೀಡಿದೆ.
ಕೇಂದ್ರ ಬಂದರು, ಹಡಗು ಸಾಗಣೆ ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ಅವರು ನವದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಅಂತರ-ಸಚಿವಾಲಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಭಾರತೀಯ ನಾವಿಕರ ಸುರಕ್ಷತೆಗಾಗಿ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಪ್ರದೇಶದಲ್ಲಿ ಸಂಚರಿಸುವ ಪ್ರತಿಯೊಂದು ಹಡಗಿನ ಮೇಲೂ ನೈಜ ಸಮಯದಲ್ಲಿ (Real-Time) ನಿಗಾ ವಹಿಸುವ ವ್ಯವಸ್ಥೆ ರೂಪಿಸುವಂತೆ ಹಾಗೂ ಸಂಕಷ್ಟಕ್ಕೆ ಸಿಲುಕಿರುವ ಪ್ರತಿಯೊಬ್ಬ ಭಾರತೀಯ ನಾವಿಕನಿಗೆ ವಿಶೇಷ ಸಂಪರ್ಕಾಧಿಕಾರಿಯನ್ನು (Liaison Officer) ನೇಮಿಸುವಂತೆ ಸಚಿವರು ಆದೇಶಿಸಿದರು.
ಇದಲ್ಲದೆ, ಬಂದರು, ಹಡಗು ಸಾಗಣೆ ಮತ್ತು ಜಲಮಾರ್ಗ ಸಚಿವಾಲಯವು ವಿದೇಶಾಂಗ ಸಚಿವಾಲಯ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ, ಭಾರತೀಯ ನೌಕಾಪಡೆ, ಹಡಗು ಸಾಗಣೆ ಮಹಾನಿರ್ದೇಶನಾಲಯ (Directorate General of Shipping) ಹಾಗೂ ಇರಾನ್ ಮತ್ತು ಓಮನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳೊಂದಿಗೆ 24 ಗಂಟೆಗಳ ಸಮನ್ವಯ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
ಸಚಿವರು, ಪರ್ಷಿಯನ್ ಕೊಲ್ಲಿ, ಹೋರ್ಮುಜ್ ಜಲಸಂಧಿ ಹಾಗೂ ಓಮನ್ ಕೊಲ್ಲಿಯಲ್ಲಿ ಸಂಚರಿಸುವ ಯಾವುದೇ ದೇಶದ ಧ್ವಜ ಹೊಂದಿರುವ ಹಡಗುಗಳಲ್ಲಿನ ಭಾರತೀಯ ನಾವಿಕರ ಮಾಹಿತಿಯನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಲು ವಿಶೇಷ ಕಾರ್ಯಾಚರಣಾ ಡ್ಯಾಶ್ಬೋರ್ಡ್ ಸ್ಥಾಪಿಸುವಂತೆ ಹಡಗು ಸಾಗಣೆ ಮಹಾನಿರ್ದೇಶನಾಲಯಕ್ಕೆ ಸೂಚಿಸಿದ್ದಾರೆ.
ಅಲ್ಲದೆ, ಇರಾನ್, ಓಮನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನೌಕಾಯಾನ ಸುರಕ್ಷತೆ, ವೈದ್ಯಕೀಯ ಸ್ಥಳಾಂತರ ಹಾಗೂ ಭಾರತಕ್ಕೆ ಮರಳುವ ವ್ಯವಸ್ಥೆ ಕುರಿತ ಮಾಹಿತಿಯನ್ನು ತ್ವರಿತವಾಗಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಹಡಗು ಮಾಲೀಕರು, ಹಡಗು ನಿರ್ವಹಣಾ ಸಂಸ್ಥೆಗಳು ಹಾಗೂ ನೇಮಕಾತಿ ಏಜೆನ್ಸಿಗಳು, ಸಮರ್ಪಕ ಮಾಹಿತಿ, ಭದ್ರತೆ ಮತ್ತು ಅಗತ್ಯ ನೆರವು ನೀಡದೆ ಯಾವುದೇ ಭಾರತೀಯ ನಾವಿಕರನ್ನು ಅಪಾಯದ ಪ್ರದೇಶಗಳಿಗೆ ಕಳುಹಿಸಬಾರದು ಎಂದು ಸಚಿವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ಈ ಪರಿಶೀಲನಾ ಸಭೆ ಎಂಟಿ ಅಲ್ ಬಹಿಯಾಹ್ (MT Al Bahiyah) ಹಾಗೂ ಎಂಟಿ ಮೊಂಬಾಸಾ (MT Mombasa) ಎಂಬ ವ್ಯಾಪಾರ ಹಡಗುಗಳ ಮೇಲೆ ಹೋರ್ಮುಜ್ ಜಲಸಂಧಿಯಲ್ಲಿ ನಡೆದ ದಾಳಿಯ ಬಳಿಕ ನಡೆಯಿತು. ಈ ಎರಡೂ ಹಡಗುಗಳಲ್ಲಿ ಒಟ್ಟು 46 ಸಿಬ್ಬಂದಿ ಇದ್ದು, ಅವರಲ್ಲಿ 30 ಮಂದಿ ಭಾರತೀಯ ನಾವಿಕರು ಸೇರಿದ್ದರು.
ಎಂಟಿ ಅಲ್ ಬಹಿಯಾಹ್ ಹಡಗಿನ ಮೇಲಿನ ದಾಳಿಯಲ್ಲಿ ಒಬ್ಬ ಭಾರತೀಯ ನಾವಿಕ ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದರು. ಎಂಟಿ ಮೊಂಬಾಸಾ ಹಡಗಿನ ಮೇಲಿನ ದಾಳಿಯಲ್ಲಿ ಒಂಬತ್ತು ಭಾರತೀಯರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಮೃತ ಭಾರತೀಯ ನಾವಿಕನ ಕುಟುಂಬಕ್ಕೆ ಸಚಿವ ಸರ್ಬಾನಂದ ಸೋನೋವಾಲ್ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಅಲ್ಲದೆ, ಸಂತ್ರಸ್ತ ನಾವಿಕರು ಹಾಗೂ ಅವರ ಕುಟುಂಬಗಳಿಗೆ ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.


