ಗ್ರಾಹಕರ ಆರೋಗ್ಯ ರಕ್ಷಣೆಗಾಗಿ ಎಫ್‌ಎಸ್‌ಎಸ್‌ಎಐ ಕ್ರಮ: ಹಾಳಾದ ಕತ್ತರಿಸುವ ಉಪಕರಣಗಳಿಗೆ ನಿಷೇಧ

1 Min Read
1 Min Read

ನವದೆಹಲಿ: ಆಹಾರ ಸುರಕ್ಷತೆ ಮತ್ತು ಗುಣಮಟ್ಟವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರ (FSSAI) ಮಹತ್ವದ ನಿರ್ದೇಶನ ಹೊರಡಿಸಿದೆ. ಆಹಾರ ತಯಾರಿಕೆ, ಸಂಸ್ಕರಣೆ ಹಾಗೂ ನಿರ್ವಹಣಾ ಚಟುವಟಿಕೆಗಳಲ್ಲಿ ಬಳಸುವ ಚಾಕು, ಬ್ಲೇಡ್ ಸೇರಿದಂತೆ ಎಲ್ಲಾ ಕತ್ತರಿಸುವ ಉಪಕರಣಗಳು ಆಹಾರ-ಗುಣಮಟ್ಟದ (Food Grade) ಹಾಗೂ ತುಕ್ಕು ನಿರೋಧಕ (Corrosion Resistant) ವಸ್ತುಗಳಿಂದ ತಯಾರಾಗಿರಬೇಕು ಎಂದು ಸೂಚಿಸಿದೆ.

ಇತ್ತೀಚಿನ ಪರಿಶೀಲನೆಗಳಲ್ಲಿ ಕೆಲವು ಆಹಾರ ವ್ಯವಹಾರ ಸಂಸ್ಥೆಗಳು ತುಕ್ಕು ಹಿಡಿದ, ಹಾನಿಗೊಳಗಾದ, ಬಣ್ಣ ಉದುರಿದ ಅಥವಾ ಸುರಕ್ಷತಾ ಮಾನದಂಡಗಳಿಗೆ ವಿರುದ್ಧವಾಗಿರುವ ಕತ್ತರಿಸುವ ಉಪಕರಣಗಳನ್ನು ಬಳಸುತ್ತಿರುವುದು ಪತ್ತೆಯಾಗಿದೆ. ಇಂತಹ ಉಪಕರಣಗಳಿಂದ ಆಹಾರದಲ್ಲಿ ಭೌತಿಕ, ರಾಸಾಯನಿಕ ಹಾಗೂ ಸೂಕ್ಷ್ಮಜೀವಿ ಮಾಲಿನ್ಯ ಉಂಟಾಗುವ ಸಾಧ್ಯತೆ ಇದ್ದು, ಇದು ಗ್ರಾಹಕರ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು ಎಂದು ಎಫ್‌ಎಸ್‌ಎಸ್‌ಎಐ ಎಚ್ಚರಿಸಿದೆ.

ಆಹಾರ ತಯಾರಿಕೆ, ಸಂಸ್ಕರಣೆ, ಪ್ಯಾಕೇಜಿಂಗ್ ಹಾಗೂ ಸಂಗ್ರಹಣೆಯಲ್ಲಿ ಬಳಸುವ ಎಲ್ಲಾ ಉಪಕರಣಗಳು ವಿಷರಹಿತ, ಆಹಾರ-ಸುರಕ್ಷಿತ ಹಾಗೂ ತುಕ್ಕು ನಿರೋಧಕ ವಸ್ತುಗಳಿಂದ ನಿರ್ಮಿತವಾಗಿರಬೇಕು. ಜೊತೆಗೆ ಅವುಗಳನ್ನು ಸ್ವಚ್ಛ ಹಾಗೂ ಆರೋಗ್ಯಕರ ಸ್ಥಿತಿಯಲ್ಲಿ ನಿರ್ವಹಿಸುವುದು ಕಡ್ಡಾಯ ಎಂದು ಪ್ರಾಧಿಕಾರ ತಿಳಿಸಿದೆ.

ಚಾಕುಗಳು ಮತ್ತು ಇತರ ಕತ್ತರಿಸುವ ಸಾಧನಗಳಲ್ಲಿ ತುಕ್ಕು, ಬಿರುಕು, ಬಣ್ಣ ಉದುರುವುದು ಅಥವಾ ಯಾವುದೇ ರೀತಿಯ ಹಾನಿ ಕಂಡುಬಂದರೆ ಅವುಗಳನ್ನು ತಕ್ಷಣವೇ ಬದಲಾಯಿಸಬೇಕು. ನಿಯಮಿತವಾಗಿ ಸ್ವಚ್ಛತೆ, ಸ್ಯಾನಿಟೈಸೇಶನ್ ಮತ್ತು ಸ್ಟೆರಿಲೈಸೇಶನ್ ಕ್ರಮಗಳನ್ನು ಅನುಸರಿಸುವಂತೆ ಆಹಾರ ಉದ್ಯಮಿಗಳಿಗೆ ಸೂಚಿಸಲಾಗಿದೆ.

ಈ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ-2006ರ ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಫ್‌ಎಸ್‌ಎಸ್‌ಎಐ ಎಚ್ಚರಿಕೆ ನೀಡಿದೆ. ರಾಜ್ಯಗಳ ಆಹಾರ ಸುರಕ್ಷತಾ ಆಯುಕ್ತರು, ಪರವಾನಗಿ ಪ್ರಾಧಿಕಾರಗಳು ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ತಪಾಸಣೆ ವೇಳೆ ವಿಶೇಷ ನಿಗಾ ವಹಿಸಿ ಉಲ್ಲಂಘನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

Share This Article
Leave a Comment