ಭಾರತದ ವಿದೇಶಿ ವಿನಿಮಯ ಮೀಸಲು 672 ಬಿಲಿಯನ್ ಡಾಲರ್ ದಾಟಿತು; ಚಿನ್ನದ ಸಂಗ್ರಹದಲ್ಲಿ ಭಾರೀ ಏರಿಕೆ
ಭಾರತದ ವಿದೇಶಿ ವಿನಿಮಯ (Forex) ಮೀಸಲು ನಿಧಿ ಜೂನ್ 19ಕ್ಕೆ ಅಂತ್ಯಗೊಂಡ ವಾರದಲ್ಲಿ 96.3 ಕೋಟಿ ಅಮೆರಿಕನ್ ಡಾಲರ್ (963 ಮಿಲಿಯನ್ ಡಾಲರ್) ಏರಿಕೆಯಾಗಿದ್ದು, ಒಟ್ಟು ಮೀಸಲು 672 ಬಿಲಿಯನ್ ಅಮೆರಿಕನ್ ಡಾಲರ್‌ಗಿಂತ ಹೆಚ್ಚಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, ಈ ಏರಿಕೆಗೆ ಪ್ರಮುಖ ಕಾರಣ ಚಿನ್ನದ ಮೀಸಲು ನಿಧಿಯಲ್ಲಿ ಕಂಡುಬಂದ ಗಣನೀಯ ಹೆಚ್ಚಳವಾಗಿದೆ. ಕಳೆದ ವಾರ ಚಿನ್ನದ ಸಂಗ್ರಹವು ಸುಮಾರು 4.1 ಬಿಲಿಯನ್ ಡಾಲರ್ ಹೆಚ್ಚಳಗೊಂಡು 107 ಬಿಲಿಯನ್ ಡಾಲರ್‌ಗಿಂತ ಅಧಿಕ ಮಟ್ಟ ತಲುಪಿದೆ.
ಆದರೆ, ವಿದೇಶಿ ವಿನಿಮಯ ಮೀಸಲಿನ ಅತಿದೊಡ್ಡ ಭಾಗವಾಗಿರುವ ವಿದೇಶಿ ಕರೆನ್ಸಿ ಆಸ್ತಿಗಳು (Foreign Currency Assets) 3.07 ಬಿಲಿಯನ್ ಡಾಲರ್ ಇಳಿಕೆಯಾಗಿದ್ದು, 541 ಬಿಲಿಯನ್ ಡಾಲರ್‌ಗೆ ತಲುಪಿವೆ.
ಇದೇ ವೇಳೆ, ವಿಶೇಷ ಡ್ರಾಯಿಂಗ್ ಹಕ್ಕುಗಳು (Special Drawing Rights – SDR) 52 ಮಿಲಿಯನ್ ಡಾಲರ್ ಇಳಿಕೆಯಾಗಿದ್ದು 18.64 ಬಿಲಿಯನ್ ಡಾಲರ್‌ಗೆ ತಲುಪಿವೆ. ಅಲ್ಲದೆ, ಅಂತರರಾಷ್ಟ್ರೀಯ ಹಣಕಾಸು ನಿಧಿ (IMF)ಯಲ್ಲಿನ ಭಾರತದ ಮೀಸಲು ಸ್ಥಾನ (Reserve Position) ಕೂಡ 22 ಮಿಲಿಯನ್ ಡಾಲರ್ ಕುಸಿದು ಸುಮಾರು 4.8 ಬಿಲಿಯನ್ ಡಾಲರ್‌ಗೆ ಇಳಿದಿದೆ.


