ಅಮರನಾಥ ಯಾತ್ರೆ ಭದ್ರತೆಗೆ ‘ಪ್ರಾಜೆಕ್ಟ್ ಹಾಕ್ ಐ’ ಆರಂಭ; ಡ್ರೋನ್, ಸ್ನೈಪರ್, AI ಕಣ್ಗಾವಲು ವ್ಯವಸ್ಥೆ
ಜುಲೈ 3ರಿಂದ ಆರಂಭವಾಗಲಿರುವ ವಾರ್ಷಿಕ ಅಮರನಾಥ ಯಾತ್ರೆಯ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಜಮ್ಮು-ಕಾಶ್ಮೀರ ಪೊಲೀಸರು ‘ಪ್ರಾಜೆಕ್ಟ್ ಹಾಕ್ ಐ’ (Project Hawk Eye) ಎಂಬ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಕಣ್ಗಾವಲು ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ.
ಅನಂತನಾಗ್ ಪೊಲೀಸ್ ಇಲಾಖೆ ಈ ವಿಶೇಷ ಯೋಜನೆಯನ್ನು ಅನಾವರಣಗೊಳಿಸಿದ್ದು, ಯಾತ್ರಾ ಮಾರ್ಗದ ಮೇಲೆ 24 ಗಂಟೆಗಳ ನಿರಂತರ ನಿಗಾವಹಿಸಲು ಐದು ಡ್ರೋನ್ ಘಟಕಗಳನ್ನು ನಿಯೋಜಿಸಲಾಗಿದೆ. ಡ್ರೋನ್‌ಗಳ ಮೂಲಕ ಯಾತ್ರಾ ಮಾರ್ಗದ ಮೇಲ್ವಿಚಾರಣೆ ನಡೆಸಿ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಕ್ಷಣವೇ ಪತ್ತೆಹಚ್ಚುವ ವ್ಯವಸ್ಥೆ ಕಲ್ಪಿಸಲಾಗಿದೆ.
ಭದ್ರತಾ ವ್ಯವಸ್ಥೆಯ ಭಾಗವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ 28 ಎತ್ತರದ ವೀಕ್ಷಣಾ ಗೋಪುರಗಳನ್ನು (ಮಚಾನ್ ಮೋರ್ಚಾ) ನಿರ್ಮಿಸಲಾಗಿದ್ದು, 22 ಸ್ನೈಪರ್ ತಂಡಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಪ್ರಮುಖ ಸ್ಥಳಗಳಲ್ಲಿ 416 ಹೈ-ರೆಸಲ್ಯೂಷನ್ ಸಿಸಿಟಿವಿ ಕ್ಯಾಮೆರಾಗಳು ಹಾಗೂ ಮುಖ ಗುರುತಿಸುವ (Face Recognition) ತಂತ್ರಜ್ಞಾನವನ್ನು ಅಳವಡಿಸಿ, ಕ್ಷಣಕ್ಷಣದ ನಿಗಾ ವ್ಯವಸ್ಥೆ ರೂಪಿಸಲಾಗಿದೆ.
ಇದೇ ವೇಳೆ ಯಾತ್ರೆಗೆ ಮುನ್ನ ಭದ್ರತಾ ಸನ್ನದ್ಧತೆಯನ್ನು ಪರಿಶೀಲಿಸಲು ಜಮ್ಮು-ಕಾಶ್ಮೀರದ ವಿವಿಧ ಭಾಗಗಳಲ್ಲಿ ಅಣಕು ಕಾರ್ಯಾಚರಣೆಗಳು (Mock Drills) ಮತ್ತು ತುರ್ತು ಪ್ರತಿಕ್ರಿಯೆ ಅಭ್ಯಾಸಗಳನ್ನು ನಡೆಸಲಾಯಿತು. ಉದಂಪುರ್ ಜಿಲ್ಲೆಯ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಬಿರ್ಮಾ ಸೇತುವೆ ಬಳಿ ವಿವಿಧ ಭದ್ರತಾ ಪಡೆಗಳು ಉಗ್ರ ದಾಳಿ ಸೇರಿದಂತೆ ತುರ್ತು ಪರಿಸ್ಥಿತಿಗಳನ್ನು ಎದುರಿಸುವ ಸಾಮರ್ಥ್ಯವನ್ನು ಪರೀಕ್ಷಿಸಿದವು.
ಜಮ್ಮು ಜಿಲ್ಲೆಯ ಆರ್.ಎಸ್.ಪುರಾ ಗಡಿ ಪ್ರದೇಶದಲ್ಲಿಯೂ ಪೊಲೀಸ್, ಬಿಎಸ್‌ಎಫ್ ಹಾಗೂ ಸಿಐಎಸ್‌ಎಫ್ ಸಿಬ್ಬಂದಿ ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸಿದ್ದು, ಯಾತ್ರಿಕರ ಸುರಕ್ಷತೆ ಮತ್ತು ಯಾತ್ರೆಯ ಸುಗಮ ನಿರ್ವಹಣೆಗೆ ಅಗತ್ಯವಿರುವ ಎಲ್ಲಾ ಭದ್ರತಾ ಕ್ರಮಗಳನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ.


