ಜನರ ಯೋಜನೆ ಅಭಿಯಾನಕ್ಕೆ ಹೊಸ ವೇಗ: ದೆಹಲಿಯಲ್ಲಿ ಪಂಚಾಯತ್ ರಾಜ್ ಸಚಿವಾಲಯದಿಂದ ರಾಷ್ಟ್ರೀಯ ಕಾರ್ಯಾಗಾರ

1 Min Read
1 Min Read

ನವದೆಹಲಿ: ಗ್ರಾಮೀಣಾಭಿವೃದ್ಧಿ ಯೋಜನೆಗಳ ರೂಪುರೇಷೆ ಮತ್ತು ಅನುಷ್ಠಾನವನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ಉದ್ದೇಶದಿಂದ ಕೇಂದ್ರ ಪಂಚಾಯತ್ ರಾಜ್ ಸಚಿವಾಲಯವು ಇಂದು ನವದೆಹಲಿಯಲ್ಲಿ ‘ಜನರ ಯೋಜನೆ ಅಭಿಯಾನ’ (People’s Plan Campaign) ಕುರಿತು ರಾಷ್ಟ್ರೀಯ ಕಾರ್ಯಾಗಾರ ಆಯೋಜಿಸಲಿದೆ.

ಕೇಂದ್ರ ಪಂಚಾಯತ್ ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ ಅವರು ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ. ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಡಾ. ವಿನೀತ್ ಜೋಶಿ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ ಅಶೋಕ್ ಕೆ.ಕೆ. ಮೀನಾ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಾರ್ಯಾಗಾರದಲ್ಲಿ ಜನರ ಯೋಜನೆ ಅಭಿಯಾನದ ಪ್ರಮುಖ ಸಾಧನೆಗಳನ್ನು ಪರಿಶೀಲಿಸುವುದರ ಜೊತೆಗೆ, 2027-28ನೇ ಹಣಕಾಸು ವರ್ಷದ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸುವಲ್ಲಿ ವಿಷಯಾಧಾರಿತ ಪಂಚಾಯತ್ ಅಭಿವೃದ್ಧಿ ಯೋಜನೆಗಳ ಪಾತ್ರದ ಕುರಿತು ಚರ್ಚೆ ನಡೆಯಲಿದೆ. ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸುಮಾರು 400 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಗಳ ಗುಣಮಟ್ಟ ಹೆಚ್ಚಿಸುವುದು, 16ನೇ ಹಣಕಾಸು ಆಯೋಗದ ಅನುದಾನ, ಪಂಚಾಯಿತಿಗಳ ಸ್ವಂತ ಆದಾಯದ ಮೂಲಗಳನ್ನು ಬಲಪಡಿಸುವುದು ಹಾಗೂ ‘ಸಮರ್ಥ ಪಂಚಾಯತ್’ ಪೋರ್ಟಲ್‌ನ ಬಳಕೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ತಾಂತ್ರಿಕ ಗೋಷ್ಠಿಗಳು ನಡೆಯಲಿವೆ.

ಇದೇ ಸಂದರ್ಭದಲ್ಲಿ ‘ಜನರ ಯೋಜನೆ ಅಭಿಯಾನ’ಕ್ಕೆ ಸಂಬಂಧಿಸಿದ ವಿಶೇಷ ಕಿರುಪುಸ್ತಕವನ್ನೂ ಬಿಡುಗಡೆ ಮಾಡಲಾಗುವುದು ಎಂದು ಪಂಚಾಯತ್ ರಾಜ್ ಸಚಿವಾಲಯ ತಿಳಿಸಿದೆ.

Share This Article