ದೇಶದಲ್ಲಿ ಕೈಗೊಳ್ಳುವ ಎಲ್ಲಾ ಆಡಳಿತಾತ್ಮಕ ಸುಧಾರಣೆಗಳು ಮತ್ತು ಆಡಳಿತ ವ್ಯವಸ್ಥೆಯ ಕೇಂದ್ರಬಿಂದುವಿನಲ್ಲಿ ಜನಕಲ್ಯಾಣವೇ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸರ್ಕಾರದ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿಸುವ ಗುರಿಗೆ ವೇಗ ನೀಡುವಂತೆಯೂ ಸುಧಾರಣೆಗಳು ಇರಬೇಕು ಎಂದು ಅವರು ಒತ್ತಿ ಹೇಳಿದರು.
ವಿಕಸಿತ ಭಾರತ (Viksit Bharat) ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ, ಕೃಷಿ, ಸಮಾಜ ಕಲ್ಯಾಣ ಹಾಗೂ ಸಂಬಂಧಿತ ಕ್ಷೇತ್ರಗಳ ಪ್ರಗತಿ ಪರಿಶೀಲನೆಗಾಗಿ ಆಯೋಜಿಸಿದ್ದ ಉನ್ನತ ಮಟ್ಟದ ಕಾರ್ಯದರ್ಶಿಗಳ ಸಭೆಯ ಅಧ್ಯಕ್ಷತೆ ವಹಿಸಿ ಪ್ರಧಾನಿ ಈ ಸೂಚನೆ ನೀಡಿದರು.
ನವದೆಹಲಿದ 7, ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿಯವರ ಅಧಿಕೃತ ನಿವಾಸದಲ್ಲಿ ನಡೆದ ಸಭೆಯಲ್ಲಿ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು, ಸಚಿವಾಲಯಗಳ ನಡುವಿನ ಸಮನ್ವಯ ಹೆಚ್ಚಿಸುವುದು ಹಾಗೂ ಜನಕಲ್ಯಾಣಕ್ಕೆ ಸಂಬಂಧಿಸಿದ ಸುಧಾರಣೆಗಳ ಅನುಷ್ಠಾನಕ್ಕೆ ವೇಗ ನೀಡುವ ಕುರಿತು ಸಮಗ್ರ ಚರ್ಚೆ ನಡೆಯಿತು.
ವೇಗವಾಗಿ ಬದಲಾಗುತ್ತಿರುವ ಆಡಳಿತ ವ್ಯವಸ್ಥೆಗೆ ಅನುಗುಣವಾಗಿ ಕಾರ್ಯವಿಧಾನಗಳನ್ನು ಆಧುನೀಕರಿಸುವ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು. ಭವಿಷ್ಯದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಎಲ್ಲ ಸಚಿವಾಲಯಗಳು ಮತ್ತು ಇಲಾಖೆಗಳ ಹೊಸ ಅಗತ್ಯಗಳನ್ನು ಸಮಗ್ರವಾಗಿ ಗುರುತಿಸಿ ಆಡಳಿತ ವ್ಯವಸ್ಥೆಯನ್ನು ಸಜ್ಜುಗೊಳಿಸುವಂತೆ ಸೂಚಿಸಿದರು.
ರಾಷ್ಟ್ರೀಯ ಅಭಿವೃದ್ಧಿಯ ಗುರಿ ಸಾಧಿಸಲು ‘Whole-of-Government’ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ಸಚಿವಾಲಯಗಳ ನಡುವೆ ಹೆಚ್ಚಿನ ಸಮನ್ವಯ ಇರಬೇಕು ಹಾಗೂ ‘ವಿಕಸಿತ ಭಾರತ’ ಕನಸು ಜನಾಂದೋಲನವಾಗಿ ರೂಪುಗೊಳ್ಳಬೇಕು ಎಂದ ಅವರು, ಈ ರಾಷ್ಟ್ರೀಯ ಅಭಿಯಾನದಲ್ಲಿ ಯುವಜನತೆ ಪ್ರಮುಖ ಶಕ್ತಿಯಾಗಬೇಕು ಎಂದು ಹೇಳಿದರು.
ಯುವಕರಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ದುರ್ಬಳಕೆ ತಡೆಗಟ್ಟಲು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವ ಸಾಂಸ್ಥಿಕ ವ್ಯವಸ್ಥೆ ಅಗತ್ಯವಿದೆ ಎಂದು ಪ್ರಧಾನಿ ಸೂಚಿಸಿದರು. ಯುವಜನರನ್ನು ಕೇಂದ್ರವಾಗಿಟ್ಟುಕೊಂಡ ಕಾರ್ಯಕ್ರಮಗಳನ್ನು ಒಗ್ಗೂಡಿಸಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.
ಕ್ರೀಡಾ ಕ್ಷೇತ್ರದ ಕುರಿತು ಮಾತನಾಡಿದ ಪ್ರಧಾನಿ, ಭಾರತವನ್ನು ಜಾಗತಿಕ ಕ್ರೀಡಾ ತಾಣವನ್ನಾಗಿ ರೂಪಿಸುವ ಸಮಗ್ರ ಅಭಿವೃದ್ಧಿ ಕಾರ್ಯತಂತ್ರ ರೂಪಿಸಬೇಕೆಂದು ಹೇಳಿದರು. ಪ್ರಮುಖ ಅಂತರರಾಷ್ಟ್ರೀಯ ಕ್ರೀಡಾಕೂಟಗಳಿಗೆ ಆತಿಥ್ಯ ವಹಿಸುವ ಜೊತೆಗೆ ಕ್ರೀಡಾ ಪ್ರವಾಸೋದ್ಯಮ, ತಂತ್ರಜ್ಞಾನ ಆವಿಷ್ಕಾರಗಳು ಹಾಗೂ ಸ್ಟಾರ್ಟ್‌ಅಪ್ ಆಧಾರಿತ ಪರಿಹಾರಗಳಿಗೆ ಉತ್ತೇಜನ ನೀಡಬೇಕು ಎಂದು ತಿಳಿಸಿದರು.
ಕೃಷಿ ಕ್ಷೇತ್ರದ ಬಲವರ್ಧನೆಯಲ್ಲಿ ಪಿಎಂ-ಕುಸುಮ್ (PM-KUSUM) ಯೋಜನೆ ಮಹತ್ವದ ಪಾತ್ರ ವಹಿಸಬಲ್ಲದು ಎಂದು ಪ್ರಧಾನಿ ಹೇಳಿದರು. ಹೆಚ್ಚಿನ ರೈತರು ಈ ಯೋಜನೆಯ ಪ್ರಯೋಜನ ಪಡೆಯುವಂತೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಸೂಚಿಸಿದರು.
ಇದೇ ವೇಳೆ, ಜಾಗತಿಕ ಉದ್ಯೋಗ ಅವಕಾಶಗಳಿಗೆ ಅನುಗುಣವಾಗಿ ಭಾರತದ ಮಾನವ ಸಂಪನ್ಮೂಲವನ್ನು ಸಜ್ಜುಗೊಳಿಸಲು ಜಾಗತಿಕ ಕೌಶಲ್ಯ ಅಗತ್ಯಗಳ ಸಮಗ್ರ ಮ್ಯಾಪಿಂಗ್ ನಡೆಸುವ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದರು.


