ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಮತ್ತು ಸ್ಲೋವಾಕಿಯಾ ದೇಶಗಳಿಗೆ ಆರು ದಿನಗಳ ಮಹತ್ವದ ಪ್ರವಾಸವನ್ನು ಇಂದು ಆರಂಭಿಸಲಿದ್ದಾರೆ. ಈ ಪ್ರವಾಸವು ಎರಡೂ ಯುರೋಪಿಯನ್ ರಾಷ್ಟ್ರಗಳೊಂದಿಗೆ ಭಾರತದ ಕಾರ್ಯತಂತ್ರದ ಹಾಗೂ ಆರ್ಥಿಕ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ.
ಈ ಭೇಟಿ ಮೂಲಕ ಯುರೋಪಿಯನ್ ಒಕ್ಕೂಟ (EU) ಜತೆಗಿನ ಭಾರತದ ವಿಸ್ತೃತ ಕಾರ್ಯತಂತ್ರದ ಪಾಲುದಾರಿಕೆಗೆ ದೇಶದ ಬದ್ಧತೆಯನ್ನು ಮತ್ತೊಮ್ಮೆ ಪುನರುಚ್ಚರಿಸಲಾಗುತ್ತದೆ.
ಪ್ರವಾಸದ ಮೊದಲ ಹಂತದಲ್ಲಿ ಪ್ರಧಾನಿ ಮೋದಿ ಅವರು ಫ್ರಾನ್ಸ್ನ ನೀಸ್ ನಗರಕ್ಕೆ ಭೇಟಿ ನೀಡಿ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಉಭಯ ನಾಯಕರು ಭಾರತ-ಫ್ರಾನ್ಸ್ ಸಂಬಂಧಗಳ ವಿವಿಧ ಆಯಾಮಗಳ ಕುರಿತು ಸಮಗ್ರ ಪರಿಶೀಲನೆ ನಡೆಸಲಿದ್ದು, ‘ಭಾರತ್ ಇನೋವೇಟ್ಸ್’ (Bharat Innovates) ಕಾರ್ಯಕ್ರಮಕ್ಕೆ ಜಂಟಿಯಾಗಿ ಚಾಲನೆ ನೀಡಲಿದ್ದಾರೆ.
ಈ ಕಾರ್ಯಕ್ರಮವು ಭಾರತ, ಫ್ರಾನ್ಸ್ ಹಾಗೂ ಇತರ ದೇಶಗಳ ಪ್ರಮುಖ ಸ್ಟಾರ್ಟ್ಅಪ್ ಸಂಸ್ಥೆಗಳು ಮತ್ತು ವೆಂಚರ್ ಕ್ಯಾಪಿಟಲ್ ನಿಧಿಗಳನ್ನು ಒಂದೇ ವೇದಿಕೆಗೆ ತರಲಿದ್ದು, ನಾವೀನ್ಯತೆ ಮತ್ತು ಹೂಡಿಕೆ ಕ್ಷೇತ್ರದಲ್ಲಿ ಸಹಕಾರಕ್ಕೆ ಉತ್ತೇಜನ ನೀಡಲಿದೆ.
ಪ್ರವಾಸದ ಎರಡನೇ ಹಂತದಲ್ಲಿ ಪ್ರಧಾನಿ ಮೋದಿ ಸ್ಲೋವಾಕಿಯಾಗೆ ಭೇಟಿ ನೀಡಲಿದ್ದು, ಸ್ಲೋವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಉಭಯ ದೇಶಗಳ ನಡುವಿನ ವ್ಯಾಪಾರ, ತಂತ್ರಜ್ಞಾನ, ಹೂಡಿಕೆ ಮತ್ತು ಇತರ ಕ್ಷೇತ್ರಗಳಲ್ಲಿ ಸಹಕಾರದ ಹೊಸ ಅವಕಾಶಗಳ ಕುರಿತು ಚರ್ಚೆ ನಡೆಯಲಿದೆ.
ಮೂರನೇ ಹಂತದಲ್ಲಿ ಪ್ರಧಾನಿ ಮೋದಿ ಅವರು ಜೂನ್ 16 ಮತ್ತು 17ರಂದು ಫ್ರಾನ್ಸ್ನ ಎವಿಯನ್ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಜಿ7 ರಾಷ್ಟ್ರಗಳ ನಾಯಕರು, ಆಹ್ವಾನಿತ ಪಾಲುದಾರ ರಾಷ್ಟ್ರಗಳು ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಜಾಗತಿಕ ಸವಾಲುಗಳು ಮತ್ತು ಸಹಕಾರದ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಿದ್ದಾರೆ.
ಪ್ರವಾಸದ ಅಂತಿಮ ಹಂತದಲ್ಲಿ ಜೂನ್ 18ರಂದು ಪ್ಯಾರಿಸ್ಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ದ್ವಿಪಕ್ಷೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಜೊತೆಗೆ ಯುರೋಪಿನ ಅತಿದೊಡ್ಡ ತಂತ್ರಜ್ಞಾನ ಮತ್ತು ಸ್ಟಾರ್ಟ್ಅಪ್ ಸಮಾವೇಶವಾದ ‘ವಿವಾಟೆಕ್ ಶೃಂಗಸಭೆ’ (VivaTech Summit)ಯಲ್ಲೂ ಪಾಲ್ಗೊಳ್ಳಲಿದ್ದಾರೆ.
ಇದೇ ವೇಳೆ ಪ್ಯಾರಿಸ್ನಲ್ಲಿರುವ ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡುವ ನಿರೀಕ್ಷೆಯಿದೆ.
ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯವರ ಉಪಸ್ಥಿತಿಯು ಜಾಗತಿಕ ದಕ್ಷಿಣದ (Global South) ಪ್ರಬಲ ಧ್ವನಿಯಾಗಿ ಹಾಗೂ ಜಾಗತಿಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಮುಖ ಪಾಲುದಾರ ರಾಷ್ಟ್ರವಾಗಿ ಭಾರತದ ಬೆಳೆಯುತ್ತಿರುವ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ.


