ಮೆಕ್ಸಿಕೊ ಸಿಟಿ: ಫಿಫಾ ವಿಶ್ವಕಪ್ 2026 ಟೂರ್ನಿಗೆ ಮೆಕ್ಸಿಕೊ ಸಿಟಿಯಲ್ಲಿ ಶುಕ್ರವಾರ ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಚಾಲನೆ ದೊರೆಯಿತು. ಉದ್ಘಾಟನಾ ಪಂದ್ಯದಲ್ಲಿ ಸಹ-ಆತಿಥೇಯ ಮೆಕ್ಸಿಕೊ ತಂಡವು ದಕ್ಷಿಣ ಆಫ್ರಿಕಾವನ್ನು 2-0 ಗೋಲುಗಳಿಂದ ಮಣಿಸಿ ಗೆಲುವಿನ ಶುಭಾರಂಭ ಮಾಡಿತು.
ಅಜ್ಟೆಕಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜುಲಿಯನ್ ಕ್ವಿನೋನ್ಸ್ 9ನೇ ನಿಮಿಷದಲ್ಲೇ ಗೋಲು ಬಾರಿಸಿ ಮೆಕ್ಸಿಕೊಗೆ ಮುನ್ನಡೆ ತಂದುಕೊಟ್ಟರು. ಬಳಿಕ 67ನೇ ನಿಮಿಷದಲ್ಲಿ ರೌಲ್ ಜಿಮೆನೆಸ್ ಮತ್ತೊಂದು ಗೋಲು ದಾಖಲಿಸಿ ತಂಡದ ಗೆಲುವನ್ನು ಖಚಿತಪಡಿಸಿದರು.
ಪಂದ್ಯವು ತೀವ್ರ ಪೈಪೋಟಿಯಿಂದ ಕೂಡಿದ್ದು, ಮೂರು ಆಟಗಾರರಿಗೆ ಕೆಂಪು ಕಾರ್ಡ್ ತೋರಿಸಲಾಯಿತು. ದಕ್ಷಿಣ ಆಫ್ರಿಕಾ ತಂಡದ ಸಿಥೋಲೆ ಮತ್ತು ಜ್ವಾನೆ ನೇರ ಕೆಂಪು ಕಾರ್ಡ್ ಪಡೆದು ಹೊರನಡೆದರೆ, ಮೆಕ್ಸಿಕೊದ ಮಾಂಟೆಸ್ ಕೂಡ ಅಮಾನತುಗೊಂಡರು. ಪರಿಣಾಮವಾಗಿ ಪಂದ್ಯ ಅಂತ್ಯಕ್ಕೆ ಮೆಕ್ಸಿಕೊ 10 ಆಟಗಾರರೊಂದಿಗೆ ಹಾಗೂ ದಕ್ಷಿಣ ಆಫ್ರಿಕಾ 9 ಆಟಗಾರರೊಂದಿಗೆ ಕಣದಲ್ಲಿತ್ತು.
‘ಎ’ ಗುಂಪಿನ ಈ ಪಂದ್ಯವು ವಿಶ್ವಕಪ್ ಇತಿಹಾಸದ ಅತಿದೊಡ್ಡ ಆವೃತ್ತಿಗೆ ಚಾಲನೆ ನೀಡಿದೆ. ಕೆನಡಾ, ಮೆಕ್ಸಿಕೊ ಮತ್ತು ಅಮೆರಿಕ ಸಂಯುಕ್ತ ಆತಿಥ್ಯದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಒಟ್ಟು 48 ತಂಡಗಳು ಪಾಲ್ಗೊಳ್ಳುತ್ತಿದ್ದು, 104 ಪಂದ್ಯಗಳು ನಡೆಯಲಿವೆ.
ಇದಕ್ಕೂ ಮುನ್ನ ನಡೆದ ಅದ್ಧೂರಿ ಉದ್ಘಾಟನಾ ಸಮಾರಂಭವು ಜಾಗತಿಕ ಸಂಗೀತ ಮತ್ತು ಸಂಸ್ಕೃತಿಯ ವೈಭವವನ್ನು ಅನಾವರಣಗೊಳಿಸಿತು. ಖ್ಯಾತ ಗಾಯಕಿ ಶಕೀರಾ ಹಾಗೂ ಬರ್ನಾ ಬಾಯ್ ಅವರು ಟೂರ್ನಿಯ ಅಧಿಕೃತ ಗೀತೆ ‘ಡೈ-ಡೈ’ ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಮೆಕ್ಸಿಕೊದ ಜನಪ್ರಿಯ ಕಲಾವಿದರಾದ ಅಲೆಹಾಂಡ್ರೊ ಫೆರ್ನಾಂಡೆಸ್, ಲಿಲಾ ಡೌನ್ಸ್, ಬೆಲಿಂಡಾ ಸೇರಿದಂತೆ ಹಲವು ಕಲಾವಿದರು ತಮ್ಮ ಅದ್ಭುತ ಪ್ರದರ್ಶನಗಳ ಮೂಲಕ ತಿಂಗಳ ಕಾಲ ನಡೆಯಲಿರುವ ಫುಟ್ಬಾಲ್ ಹಬ್ಬಕ್ಕೆ ರಂಗೇರಿಸಿದರು.
.


