ನ್ಯೂಯಾರ್ಕ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಸುಧಾರಣೆಯ ಪ್ರಯತ್ನಗಳು ಕೇವಲ ತಾತ್ಕಾಲಿಕ ಸದಸ್ಯತ್ವ ವಿಭಾಗದ ವಿಸ್ತರಣೆಗೆ ಸೀಮಿತವಾದರೆ ಅದು ವಿಫಲತೆಯ ಅಂಚಿಗೆ ತಲುಪುವ ಸಾಧ್ಯತೆ ಇದೆ ಎಂದು ಭಾರತ ಎಚ್ಚರಿಕೆ ನೀಡಿದೆ.
ಭದ್ರತಾ ಮಂಡಳಿ ಸುಧಾರಣೆ ಕುರಿತ ಅಂತರಸರ್ಕಾರಿ ಮಾತುಕತೆ (Inter-Governmental Negotiations) ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ರಾಯಭಾರಿ ಹರೀಶ್ ಪರ್ವತನೇನಿ, ಕೇವಲ ಅಶಾಶ್ವತ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವುದರಿಂದ ಭದ್ರತಾ ಮಂಡಳಿಯ ಮೂಲಭೂತ ನಿರ್ಧಾರಾತ್ಮಕ ರಚನೆಯಲ್ಲಿ ಯಾವುದೇ ಬದಲಾವಣೆ ಉಂಟಾಗುವುದಿಲ್ಲ ಎಂದು ಹೇಳಿದರು.
ಪ್ರಸ್ತುತ ವೀಟೋ ಅಧಿಕಾರ ಹೊಂದಿರುವ ಐದು ಶಾಶ್ವತ ಸದಸ್ಯ ರಾಷ್ಟ್ರಗಳಾದ ಚೀನಾ, ಫ್ರಾನ್ಸ್, ರಷ್ಯಾ, ಬ್ರಿಟನ್ ಮತ್ತು ಅಮೆರಿಕಗಳ ನಿರ್ಧಾರಾತ್ಮಕ ಪ್ರಾಬಲ್ಯವನ್ನು ಸಮತೋಲನಗೊಳಿಸಲು ಶಾಶ್ವತ ಸದಸ್ಯತ್ವ ವಿಭಾಗದ ವಿಸ್ತರಣೆ ಅಗತ್ಯ ಎಂದು ಅವರು ಒತ್ತಿ ಹೇಳಿದರು.
ಭಾರತದ ನಿಲುವು ಸದಾ ಭದ್ರತಾ ಮಂಡಳಿಯಲ್ಲಿ ಹೆಚ್ಚಿನ ಸಮಾನತೆ, ನ್ಯಾಯಸಮ್ಮತ ಪ್ರತಿನಿಧಿತ್ವ ಹಾಗೂ ಜಾಗತಿಕ ವಾಸ್ತವಿಕತೆಗಳಿಗೆ ತಕ್ಕ ಸಮತೋಲನವನ್ನು ತರಬೇಕೆಂಬುದಾಗಿದೆ ಎಂದು ಪರ್ವತನೇನಿ ತಿಳಿಸಿದರು.
ಇದೇ ವೇಳೆ, ಚರ್ಚೆಗಳು ಹೆಚ್ಚು ಉದ್ದೇಶಪೂರಿತ ಹಾಗೂ ಫಲಿತಾಂಶ ಕೇಂದ್ರೀತವಾಗಿರಲು ಪಠ್ಯಾಧಾರಿತ (Text-Based) ಮಾತುಕತೆಗಳನ್ನು ಆರಂಭಿಸುವ ಅಗತ್ಯವಿದೆ ಎಂದು ಭಾರತ ಮತ್ತೊಮ್ಮೆ ಆಗ್ರಹಿಸಿತು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆ ಕುರಿತ ಚರ್ಚೆಗಳು ಹಲವು ವರ್ಷಗಳಿಂದ ನಡೆಯುತ್ತಿದ್ದು, ಭಾರತ ಸೇರಿದಂತೆ ಹಲವು ದೇಶಗಳು ಶಾಶ್ವತ ಸದಸ್ಯತ್ವ ವಿಸ್ತರಣೆಗೆ ಒತ್ತಾಯಿಸುತ್ತಿವೆ.


