ನ್ಯೂಯಾರ್ಕ್: ವಿಶ್ವಸಂಸ್ಥೆಯ (ಯುಎನ್) ಮುಂದಿನ ಮಹಾಸಚಿವರ ಆಯ್ಕೆ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ಈ ಸಂಬಂಧ ವಿಶ್ವಸಂಸ್ಥೆಯ ಮಹಾಸಭೆ (UNGA) ಐದನೇ ಸಂವಾದಾತ್ಮಕ ಸಭೆಯನ್ನು ನಡೆಸಿದೆ.
ಸಭೆಯಲ್ಲಿ ಆಂಟಿಗುವಾ ಮತ್ತು ಬಾರ್ಬುಡಾ ದೇಶದ ನಾಮನಿರ್ದೇಶನದಡಿ ಸ್ಪರ್ಧಿಸುತ್ತಿರುವ ಇಕ್ವೆಡಾರ್‌ನ ಮಾಜಿ ವಿದೇಶಾಂಗ ಹಾಗೂ ರಕ್ಷಣಾ ಸಚಿವೆ, ಹಾಗು ಮಾಜಿ ಯುಎನ್ ಮಹಾಸಭೆ ಅಧ್ಯಕ್ಷೆ ಮಾರಿಯಾ ಫೆರ್ನಾಂಡಾ ಎಸ್ಪಿನೋಸಾ ತಮ್ಮ ದೃಷ್ಟಿಕೋನ ಮತ್ತು ಕಾರ್ಯಯೋಜನೆಯನ್ನು ಮಂಡಿಸಿದರು. ಬಳಿಕ ಸದಸ್ಯ ರಾಷ್ಟ್ರಗಳು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಈ ವರ್ಷದ ಏಪ್ರಿಲ್‌ನಲ್ಲಿ ಯುಎನ್ ಮಹಾಸಭೆ ಎರಡು ದಿನಗಳ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಅದರಲ್ಲಿ ಬ್ರೆಜಿಲ್ ಮತ್ತು ಮೆಕ್ಸಿಕೋ ದೇಶಗಳ ಬೆಂಬಲ ಹೊಂದಿರುವ ಚಿಲಿಯ ಮಾಜಿ ಅಧ್ಯಕ್ಷೆ ಮಿಶೆಲ್ ಬಾಚೆಲೆಟ್, ಅರ್ಜೆಂಟಿನಾ ನಾಮನಿರ್ದೇಶಿತ ಹಾಗೂ ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (IAEA) ಮಹಾನಿರ್ದೇಶಕ ರಫೇಲ್ ಗ್ರೋಸಿ, ಬುರುಂಡಿ ಬೆಂಬಲಿತ ಸೆನೆಗಲ್‌ನ ಮಾಜಿ ಅಧ್ಯಕ್ಷ ಮ್ಯಾಕಿ ಸಾಲ್, ಹಾಗೂ ಕೋಸ್ಟಾರಿಕಾದ ಮಾಜಿ ಉಪಾಧ್ಯಕ್ಷೆ ಮತ್ತು ಅರ್ಥಶಾಸ್ತ್ರಜ್ಞೆ ರೆಬೆಕಾ ಗ್ರಿನ್ಸ್‌ಪಾನ್ ಭಾಗವಹಿಸಿದ್ದರು.
ಪ್ರಸ್ತುತ ವಿಶ್ವಸಂಸ್ಥೆಯ 9ನೇ ಮಹಾಸಚಿವರಾಗಿರುವ ಆಂಟೋನಿಯೊ ಗೂಟೆರ್ರೆಸ್ ಅವರ ಅಧಿಕಾರಾವಧಿ ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ. ಹೊಸ ಮಹಾಸಚಿವರು 2027ರ ಜನವರಿ 1ರಿಂದ ಅಧಿಕಾರ ಸ್ವೀಕರಿಸಲಿದ್ದಾರೆ.
ವಿಶ್ವ ರಾಜಕೀಯ, ಶಾಂತಿ, ಹವಾಮಾನ ಬದಲಾವಣೆ, ಅಭಿವೃದ್ಧಿ ಹಾಗೂ ಜಾಗತಿಕ ಸಹಕಾರದಂತಹ ಪ್ರಮುಖ ಸವಾಲುಗಳ ನಡುವೆ ವಿಶ್ವಸಂಸ್ಥೆಗೆ ಮುಂದಿನ ನಾಯಕತ್ವ ಯಾರು ಎಂಬುದು ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.


