ಜರ್ಮನಿಯ ಸುಲ್ನಲ್ಲಿ ನಡೆದ ಐಎಸ್ಸೆಸ್ಸೆಫ್ (ISSF) ಜೂನಿಯರ್ ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್-2026ರಲ್ಲಿ ಭಾರತ 25 ಪದಕಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಅಂತಿಮ ದಿನ 50 ಮೀಟರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ನಾಲ್ಕು ಪದಕಗಳನ್ನು ತನ್ನದಾಗಿಸಿಕೊಂಡ ಭಾರತ ಸತತ ಎರಡನೇ ಬಾರಿಗೆ ಚಾಂಪಿಯನ್ಶಿಪ್ನ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಪುರುಷರ 50 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ರಾಜ್ ಚಂದ್ರ 551-8x ಅಂಕಗಳೊಂದಿಗೆ ಕಂಚಿನ ಪದಕ ಗೆದ್ದರು. ಕುಮಾರ್ ಯೋಗೇಶ್ 548-4x ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರು.
ತಂಡ ವಿಭಾಗದಲ್ಲಿ ಕುಮಾರ್ ಯೋಗೇಶ್, ಪ್ರತೀಕ್ ಹಾಗೂ ಅಭಿನವ್ ಚೌಧರಿ ಅವರ ತ್ರಯ 1,610-15x ಅಂಕಗಳನ್ನು ದಾಖಲಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿತು. ಇಂಡಿವಿಜುವಲ್ ನ್ಯೂಟ್ರಲ್ ಅಥ್ಲೀಟ್ಗಳ ತಂಡ ಚಿನ್ನ ಗೆದ್ದರೆ, ಉಕ್ರೇನ್ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.
ಮಹಿಳೆಯರ 50 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಐಶ್ವರ್ಯಾ ರವಿಚಂದ್ರ ಬಾಳೆಹೊಸೂರು 540-11x ಅಂಕಗಳೊಂದಿಗೆ ಅತ್ಯಂತ ಕಡಿಮೆ ಅಂತರದಲ್ಲಿ ಚಿನ್ನದ ಪದಕ ತಪ್ಪಿಸಿಕೊಂಡು ಬೆಳ್ಳಿ ಪದಕ ಪಡೆದರು. ಇಂಡಿವಿಜುವಲ್ ನ್ಯೂಟ್ರಲ್ ಅಥ್ಲೀಟ್ ಸೋಫಿಯಾ ಸ್ಮೆಟಾಂಕಿನಾ 540-12x ಅಂಕಗಳೊಂದಿಗೆ ಚಿನ್ನ ಗೆದ್ದರೆ, ಮಂಗೋಲಿಯಾದ ಅರಿಯುನ್ಜಯಾ ಅಮರ್ಬಯಾಸ್ಗಲಾನ್ ಕಂಚಿನ ಪದಕ ಪಡೆದರು. ಭಾರತದ ಪರಿಶಾ ಗುಪ್ತಾ ನಾಲ್ಕನೇ ಸ್ಥಾನ ಪಡೆದರೂ, ಸಂಸ್ಕೃತಿ ಬಾನಾ ಹಾಗೂ ಸೇಜಲ್ ಕಾಂಬಳೆ ಅವರೊಂದಿಗೆ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು.
ಈ ನಾಲ್ಕು ಪದಕಗಳೊಂದಿಗೆ ಭಾರತ ಒಟ್ಟು 7 ಚಿನ್ನ, 8 ಬೆಳ್ಳಿ ಮತ್ತು 10 ಕಂಚು ಸೇರಿ 25 ಪದಕಗಳನ್ನು ತನ್ನದಾಗಿಸಿಕೊಂಡಿತು. ಕಳೆದ ಆವೃತ್ತಿಯಲ್ಲಿ ಪೆರುವಿನ ಲಿಮಾದಲ್ಲಿ 24 ಪದಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದ ಭಾರತ, ಈ ಬಾರಿಯೂ ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.


