ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಈಕ್ವೆಡಾರ್ ತಂಡ ಜರ್ಮನಿಯನ್ನು 2-1 ಗೋಲುಗಳಿಂದ ಮಣಿಸಿ ನಾಕೌಟ್ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ನ್ಯೂಜೆರ್ಸಿಯ ಕ್ರೀಡಾಂಗಣದಲ್ಲಿ ನಡೆದ ಗ್ರೂಪ್ ‘ಇ’ ಪಂದ್ಯದಲ್ಲಿ ಹಿನ್ನಡೆಯಿಂದ ಚೇತರಿಸಿಕೊಂಡ ಈಕ್ವೆಡಾರ್ ರೋಚಕ ಗೆಲುವು ದಾಖಲಿಸಿತು. ಗೋನ್ಸಾಲೊ ಪ್ಲಾಟಾ ತಂಡದ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದರು.
ಇದೇ ವೇಳೆ ಫಿಲಡೆಲ್ಫಿಯಾದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಕೋಟ್ ಡಿ’ಐವೊರ್ (ಐವರಿ ಕೋಸ್ಟ್) ತಂಡ ಕುರಸಾವೊ ವಿರುದ್ಧ 2-0 ಗೋಲುಗಳ ಸುಲಭ ಜಯ ಸಾಧಿಸಿ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ನಾಕೌಟ್ ಹಂತ ಪ್ರವೇಶಿಸಿದೆ. ನಿಕೊಲಸ್ ಪೆಪೆ ಎರಡೂ ಗೋಲುಗಳನ್ನು ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಗ್ರೂಪ್ ‘ಎಫ್’ನ ಪಂದ್ಯದಲ್ಲಿ ಜಪಾನ್ ಮತ್ತು ಸ್ವೀಡನ್ 1-1 ಗೋಲುಗಳಿಂದ ಡ್ರಾ ಸಾಧಿಸಿದರೂ ಎರಡೂ ತಂಡಗಳು ನಾಕೌಟ್ ಹಂತಕ್ಕೆ ಪ್ರವೇಶಿಸಿವೆ. ಇದೀಗ ಜಪಾನ್, ರೌಂಡ್ ಆಫ್ 32ರಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್ ಬ್ರೆಜಿಲ್ ತಂಡವನ್ನು ಎದುರಿಸಲಿದೆ.
ಇನ್ನೊಂದೆಡೆ, ಕಾನ್ಸಾಸ್ ಸಿಟಿಯಲ್ಲಿ ನಡೆದ ಪಂದ್ಯದಲ್ಲಿ ನೆದರ್‌ಲ್ಯಾಂಡ್ಸ್ ತಂಡ ಟುನೀಶಿಯಾವನ್ನು 3-1 ಗೋಲುಗಳಿಂದ ಸೋಲಿಸಿ ಗ್ರೂಪ್ ‘ಎಫ್’ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ನಾಕೌಟ್ ಹಂತದಲ್ಲಿ ನೆದರ್‌ಲ್ಯಾಂಡ್ಸ್‌ಗೆ ಮೊರಾಕೊ ಎದುರಾಳಿಯಾಗಲಿದೆ.


