ಗ್ಲಾಸ್ಗೋ: ಕಾಮನ್‌ವೆಲ್ತ್ ಗೇಮ್ಸ್-2026ರಲ್ಲಿ ಭಾರತದ ಪದಕ ಖಾತೆಯನ್ನು ಚಿನ್ನದಿಂದ ತೆರೆದ ಭಾರತದ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು, ಮಹಿಳೆಯರ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಮತ್ತೊಮ್ಮೆ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ.
31 ವರ್ಷದ ಮೀರಾಬಾಯಿ ಚಾನು ಒಟ್ಟು 190 ಕೆಜಿ ಭಾರ ಎತ್ತುವ ಮೂಲಕ ಹೊಸ ಕಾಮನ್‌ವೆಲ್ತ್ ಗೇಮ್ಸ್ ದಾಖಲೆಯನ್ನು ನಿರ್ಮಿಸಿದರು. ಅವರು ಸ್ನ್ಯಾಚ್‌ನಲ್ಲಿ 85 ಕೆಜಿ ಹಾಗೂ ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 105 ಕೆಜಿ ಎತ್ತಿ ಎರಡೂ ವಿಭಾಗಗಳಲ್ಲಿ ಹೊಸ ಗೇಮ್ಸ್ ದಾಖಲೆ ಬರೆದರು.
ಈ ಗೆಲುವಿನೊಂದಿಗೆ ಮೀರಾಬಾಯಿ ಚಾನು 2018, 2022 ಮತ್ತು 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸತತ ಮೂರನೇ ಬಾರಿಗೆ ಚಿನ್ನದ ಪದಕ ಗೆದ್ದ ಅಪರೂಪದ ಸಾಧನೆ ಮಾಡಿದ್ದಾರೆ.
ರಾಷ್ಟ್ರ ನಾಯಕರಿಂದ ಅಭಿನಂದನೆ
ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಮೀರಾಬಾಯಿ ಚಾನು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೀರಾಬಾಯಿ ಅವರ ಅಸಾಧಾರಣ ದೃಢಸಂಕಲ್ಪ, ಪರಿಶ್ರಮ ಮತ್ತು ಶ್ರೇಷ್ಠ ಸಾಧನೆಯನ್ನು ಪ್ರಶಂಸಿಸಿದ್ದಾರೆ. ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಅವರ ಸಮರ್ಪಣೆ, ಸ್ಥೈರ್ಯ ಮತ್ತು ನಿರಂತರ ಸಾಧನೆಯನ್ನು ಕೊಂಡಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಈ ಗೆಲುವು ಭಾರತೀಯ ವೇಟ್‌ಲಿಫ್ಟಿಂಗ್ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯವಾಗಿದ್ದು, ಮೀರಾಬಾಯಿ ಚಾನು ದೇಶದ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಭಾರತಕ್ಕೆ ಇನ್ನೆರಡು ಬೆಳ್ಳಿ ಪದಕ
ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಇನ್ನೆರಡು ಬೆಳ್ಳಿ ಪದಕಗಳು ಲಭಿಸಿವೆ.
ಪುರುಷರ 60 ಕೆಜಿ ವಿಭಾಗದಲ್ಲಿ ಚನಂಬಂ ರಿಷಿಕಾಂತ ಸಿಂಗ್ ಒಟ್ಟು 264 ಕೆಜಿ ಭಾರ ಎತ್ತಿ ಬೆಳ್ಳಿ ಪದಕ ಗೆದ್ದರು. ಅವರು ಸ್ನ್ಯಾಚ್‌ನಲ್ಲಿ 121 ಕೆಜಿ ಎತ್ತುವ ಮೂಲಕ ಕಾಮನ್‌ವೆಲ್ತ್ ಗೇಮ್ಸ್ ದಾಖಲೆಯನ್ನು ಸರಿಗಟ್ಟಿದರೆ, ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 143 ಕೆಜಿ ಭಾರ ಎತ್ತಿದರು.
ಪುರುಷರ 65 ಕೆಜಿ ವಿಭಾಗದಲ್ಲಿ ರಾಜಾ ಮುತ್ತುಪಾಂಡಿ ಒಟ್ಟು 286 ಕೆಜಿ ಭಾರ ಎತ್ತಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಅವರು ಸ್ನ್ಯಾಚ್‌ನಲ್ಲಿ 126 ಕೆಜಿ ಹಾಗೂ ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 160 ಕೆಜಿ ಎತ್ತಿದರು. ಈ ವಿಭಾಗದಲ್ಲಿ ಮಲೇಷ್ಯಾದ ಮುಹಮ್ಮದ್ ಅಜ್ನಿಲ್ ಬಿನ್ ಬಿಡಿನ್ ಒಟ್ಟು 299 ಕೆಜಿ ಭಾರ ಎತ್ತಿ ಗೇಮ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದರು.
ಬಾಕ್ಸಿಂಗ್‌ನಲ್ಲೂ ಭಾರತದ ಶುಭಾರಂಭ
ಬಾಕ್ಸಿಂಗ್ ಸ್ಪರ್ಧೆಯಲ್ಲೂ ಭಾರತದ ಆಟಗಾರರು ಉತ್ತಮ ಪ್ರದರ್ಶನ ನೀಡಿದರು.
ಪುರುಷರ 55 ಕೆಜಿ ವಿಭಾಗದಲ್ಲಿ ಜದುಮನಿ ಸಿಂಗ್, ಪಾಕಿಸ್ತಾನದ ಸುಮಾಮಾ ರೆಹಮಾನ್ ಅವರನ್ನು ಸೋಲಿಸಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದರು.
ಮಹಿಳೆಯರ 54 ಕೆಜಿ ವಿಭಾಗದಲ್ಲಿ ಪ್ರೀತಿ ಪವಾರ್, ಮಲಾವಿಯ ಡೆಬೋರಾ ಮ್ಟೆಂಜೆ ಅವರನ್ನು ಮಣಿಸಿ ಅಂತಿಮ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟರು.
ಭಾರತದ ಪದಕ ಪಟ್ಟಿಯಲ್ಲಿ ನಾಲ್ಕು ಪದಕ
ಈ ಸಾಧನೆಗಳೊಂದಿಗೆ ಕಾಮನ್‌ವೆಲ್ತ್ ಗೇಮ್ಸ್-2026ರಲ್ಲಿ ಭಾರತದ ಪದಕಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಭಾರತ ಇದುವರೆಗೆ 1 ಚಿನ್ನ, 2 ಬೆಳ್ಳಿ ಮತ್ತು 1 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ.
ಇದಕ್ಕೂ ಮೊದಲು ಪ್ಯಾರಾ ಪವರ್‌ಲಿಫ್ಟರ್ ಝಂಡು ಕುಮಾರ್ ಪುರುಷರ ಹೆವಿವೇಟ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಭಾರತದ ಪದಕ ಖಾತೆ ತೆರೆದಿದ್ದರು.


