ಆಶೂರಾ-ಎ-ಮೊಹರಂ ಅಂಗವಾಗಿ ದೇಶಾದ್ಯಂತ ಇಂದು ಭಕ್ತಿ, ಶ್ರದ್ಧೆ ಹಾಗೂ ಗಂಭೀರ ವಾತಾವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಈ ದಿನವು ಪ್ರವಾದಿ ಮೊಹಮ್ಮದ್ ಅವರ ಮೊಮ್ಮಗ ಹಜರತ್ ಇಮಾಮ್ ಹುಸೇನ್ ಹಾಗೂ ಅವರ ಸಹಚರರು ಕರಬಲಾ ಯುದ್ಧದಲ್ಲಿ ಸತ್ಯ, ನ್ಯಾಯ ಮತ್ತು ಧರ್ಮದ ರಕ್ಷಣೆಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ದಿನವಾಗಿ ಸ್ಮರಿಸಲಾಗುತ್ತದೆ.
ಈ ಸಂದರ್ಭದಲ್ಲಿ ವಿವಿಧ ನಗರಗಳಲ್ಲಿ ತಾಜಿಯಾ ಮೆರವಣಿಗೆಗಳು ನಡೆಯುತ್ತಿದ್ದು, ಕರಬಲಾ ಹುತಾತ್ಮರ ತ್ಯಾಗ ಮತ್ತು ಸಂದೇಶವನ್ನು ಸಾರುವ ಮಜ್ಲಿಸ್ (ಧಾರ್ಮಿಕ ಸಭೆಗಳು) ಆಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ವ್ಯಾಪಕ ಭದ್ರತಾ ವ್ಯವಸ್ಥೆ ಕಲ್ಪಿಸಿದೆ.
ಆಶೂರಾ-ಎ-ಮೊಹರಂ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಜರತ್ ಇಮಾಮ್ ಹುಸೇನ್ ಅವರ ತ್ಯಾಗವನ್ನು ಸ್ಮರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಸತ್ಯ ಮತ್ತು ನ್ಯಾಯದ ಹಾದಿಯಲ್ಲಿ ಅಚಲವಾಗಿ ನಿಲ್ಲುವ ಪ್ರೇರಣೆಯನ್ನು ಇಮಾಮ್ ಹುಸೇನ್ ಅವರ ಜೀವನ ಇಂದಿಗೂ ನೀಡುತ್ತಿದೆ ಎಂದು ಹೇಳಿದ್ದಾರೆ.
ಧೈರ್ಯ, ನಿಷ್ಠೆ ಹಾಗೂ ತತ್ವನಿಷ್ಠೆಯ ಶಾಶ್ವತ ಸಂದೇಶವನ್ನು ಆಶೂರಾ-ಎ-ಮೊಹರಂ ನೆನಪಿಸುತ್ತದೆ ಎಂದು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.


