ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆ, ಭೂಕುಸಿತ ಹಾಗೂ ಗುಡ್ಡಗಳಿಂದ ಕಲ್ಲುಗಳು ಉರುಳುತ್ತಿರುವ ಪರಿಣಾಮ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ (NH-44) ಇನ್ನೂ ಬಂದ್ ಆಗಿರುವ ಹಿನ್ನೆಲೆಯಲ್ಲಿ, ಸಿಲುಕಿರುವ ಪ್ರಯಾಣಿಕರ ನೆರವಿಗಾಗಿ ಉತ್ತರ ರೈಲ್ವೆ ವಿಶೇಷ ರೈಲು ಸೇವೆಯನ್ನು ಆರಂಭಿಸಿದೆ.
ಶ್ರೀನಗರ–ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ನಡುವಿನ ಈ ವಿಶೇಷ ರೈಲನ್ನು, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿರ್ಬಂಧ ಮತ್ತು ನಿಧಾನಗತಿಯ ಕಾರಣ ಉಂಟಾದ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಜಮ್ಮು ವಾಣಿಜ್ಯ ನಿಯಂತ್ರಣ ವಿಭಾಗದ (Commercial Control) ಮನವಿಯ ಮೇರೆಗೆ ಆರಂಭಿಸಲಾಗಿದೆ.
ಈ ವಿಶೇಷ ರೈಲು ಸೇವೆಯ ಮೂಲಕ 600ಕ್ಕೂ ಹೆಚ್ಚು ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಪ್ರತಿಕೂಲ ಹವಾಮಾನ ಹಾಗೂ ಹೆದ್ದಾರಿ ಬಂದ್‌ನಿಂದ ರಸ್ತೆ ಮಾರ್ಗದಲ್ಲಿ ಪ್ರಯಾಣಿಸಲು ಸಾಧ್ಯವಾಗದವರಿಗೆ ಈ ಸೇವೆ ದೊಡ್ಡ ನೆರವಾಗಿದೆ.
ಭೂಕುಸಿತ, ಗುಡ್ಡಗಳಿಂದ ಕಲ್ಲುಗಳು ಉರುಳುವುದು ಹಾಗೂ ರಸ್ತೆ ಕೊಚ್ಚಿಹೋಗಿರುವ ಕಾರಣ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಹಲವು ಸ್ಥಳಗಳಲ್ಲಿ ಸಂಚಾರಕ್ಕೆ ಬಂದ್ ಆಗಿದ್ದು, ನೂರಾರು ವಾಹನಗಳು ಹಾಗೂ ಪ್ರಯಾಣಿಕರು ಸಿಲುಕಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆ ಹಾಗೂ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಉತ್ತರ ರೈಲ್ವೆ ಹೆಚ್ಚುವರಿ ವಿಶೇಷ ರೈಲು ಸೇವೆಯನ್ನು ಕಾರ್ಯಾಚರಣೆಗೆ ತಂದಿದೆ.


