ಲಂಡನ್: ಮಕ್ಕಳ ಆನ್ಲೈನ್ ಸುರಕ್ಷತೆಯನ್ನು ಬಲಪಡಿಸುವ ಉದ್ದೇಶದಿಂದ ಬ್ರಿಟನ್ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೆಚ್ಚಿನ ಅಪಾಯ ಹೊಂದಿರುವ ಸಾಮಾಜಿಕ ಜಾಲತಾಣಗಳ ಪ್ರವೇಶವನ್ನು ನಿಷೇಧಿಸಿದೆ.
ಈ ಕ್ರಮವನ್ನು ‘ಐತಿಹಾಸಿಕ ಹೆಜ್ಜೆ’ ಎಂದು ಬಣ್ಣಿಸಿರುವ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಇದು ಮಕ್ಕಳ ಜೀವನದಲ್ಲಿ ನೈಜ ಬದಲಾವಣೆ ತರುವುದರ ಜೊತೆಗೆ ಅವರ ಬಾಲ್ಯವನ್ನು ಮರಳಿ ನೀಡುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.
ಸರ್ಕಾರದ ಪ್ರಕಟಣೆಯ ಪ್ರಕಾರ, ಕೇವಲ ಸಾಮಾಜಿಕ ಜಾಲತಾಣಗಳ ಮೇಲಿನ ಸಾಮಾನ್ಯ ನಿರ್ಬಂಧವಷ್ಟೇ ಅಲ್ಲದೆ, ಮಕ್ಕಳಿಗೆ ಅಪಾಯಕಾರಿಯಾಗಬಹುದಾದ ಹಲವು ಡಿಜಿಟಲ್ ವೈಶಿಷ್ಟ್ಯಗಳ ಮೇಲೂ ಕಟ್ಟುನಿಟ್ಟಿನ ನಿಯಂತ್ರಣ ಜಾರಿಯಾಗಲಿದೆ.
ವಿಶೇಷವಾಗಿ 16 ವರ್ಷದೊಳಗಿನ ಮಕ್ಕಳಿಗೆ ಲೈವ್ಸ್ಟ್ರೀಮಿಂಗ್, ಅಪರಿಚಿತರೊಂದಿಗೆ ನೇರ ಸಂವಹನ (Stranger Communication) ಸೇರಿದಂತೆ ಹಾನಿಕಾರಕ ಎಂದು ಪರಿಗಣಿಸಲಾದ ಆನ್ಲೈನ್ ಸೌಲಭ್ಯಗಳನ್ನು ನಿರ್ಬಂಧಿಸಲಾಗುತ್ತದೆ.
ಈ ನಿಯಮಗಳು ಕೇವಲ ಸಾಮಾಜಿಕ ಜಾಲತಾಣಗಳಿಗೆ ಮಾತ್ರ ಸೀಮಿತವಾಗದೆ, ವಿವಿಧ ಆನ್ಲೈನ್ ಸೇವೆಗಳು ಹಾಗೂ ಗೇಮಿಂಗ್ ವೇದಿಕೆಗಳಿಗೂ ಅನ್ವಯವಾಗಲಿವೆ ಎಂದು ಬ್ರಿಟನ್ ಸರ್ಕಾರ ಸ್ಪಷ್ಟಪಡಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಮಾನಸಿಕ ಆರೋಗ್ಯ, ಸೈಬರ್ ಕಿರುಕುಳ, ಆನ್ಲೈನ್ ಶೋಷಣೆ ಹಾಗೂ ಡಿಜಿಟಲ್ ವ್ಯಸನ ಕುರಿತ ಆತಂಕಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ.
ಹೊಸ ನೀತಿಯು ಮಕ್ಕಳಿಗೆ ಸುರಕ್ಷಿತ ಡಿಜಿಟಲ್ ವಾತಾವರಣ ಕಲ್ಪಿಸುವುದರ ಜೊತೆಗೆ ತಂತ್ರಜ್ಞಾನ ಕಂಪನಿಗಳ ಜವಾಬ್ದಾರಿಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ ಎಂದು ಸರ್ಕಾರ ತಿಳಿಸಿದೆ


