ಅಮೆರಿಕದ ದೀಪಾವಳಿ ಸ್ಮರಣಾರ್ಥ ಅಂಚೆ ಚೀಟಿಯಲ್ಲಿ ಭಾರತೀಯ ಕಲಾವಿದೆ ಸಂಗೀತಾ ಬುಟಾಡಾ ಅವರ ರಂಗೋಲಿ ವಿನ್ಯಾಸ

1 Min Read
1 Min Read

ವಾಷಿಂಗ್ಟನ್: ಭಾರತೀಯ ಸಂಪ್ರದಾಯಿಕ ಕಲೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಗೌರವ ದೊರೆತಿದೆ. ಅಮೆರಿಕದ ಅಂಚೆ ಸೇವೆ (USPS), ದೀಪಾವಳಿ ಹಬ್ಬದ ಸ್ಮರಣಾರ್ಥವಾಗಿ ಭಾರತೀಯ ಮೂಲದ ಕಲಾವಿದೆ ಸಂಗೀತಾ ಬುಟಾಡಾ ಅವರು ರಚಿಸಿದ ರಂಗೋಲಿ ವಿನ್ಯಾಸವನ್ನು ಒಳಗೊಂಡ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ.

ಹೂಸ್ಟನ್‌ನಲ್ಲಿ ನೆಲೆಸಿರುವ ಸಂಗೀತಾ ಬುಟಾಡಾ ಅವರ ಕಲಾಕೃತಿಯನ್ನು ಒಳಗೊಂಡ ಈ ಅಂಚೆ ಚೀಟಿಯನ್ನು ನಿನ್ನೆ ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು. ಅಮೆರಿಕದ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಹಾಗೂ USPSನ ಹಿರಿಯ ಉಪಾಧ್ಯಕ್ಷೆ ಶಿಬಾನಿ ಗಂಭೀರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಳೆದ ಸುಮಾರು 30 ವರ್ಷಗಳಿಂದ ರಂಗೋಲಿ ಕಲೆಯಲ್ಲಿ ತೊಡಗಿಸಿಕೊಂಡಿರುವ ಸಂಗೀತಾ ಬುಟಾಡಾ, ಈ ವಿನ್ಯಾಸವನ್ನು ಪೂರ್ಣಗೊಳಿಸಲು ಸುಮಾರು 10 ದಿನಗಳನ್ನು ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ.

ಎಂಟು ಅಡಿ ವಿಸ್ತೀರ್ಣದ ಈ ರಂಗೋಲಿ ವಿನ್ಯಾಸದಲ್ಲಿ ನೀಲಿ, ಕಿತ್ತಳೆ, ಹಸಿರು, ಕೆಂಪು ಮತ್ತು ಬಿಳಿ ಬಣ್ಣಗಳನ್ನು ಆಕರ್ಷಕವಾಗಿ ಬಳಸಲಾಗಿದೆ. ಭಾರತೀಯ ಸಂಸ್ಕೃತಿ ಮತ್ತು ದೀಪಾವಳಿಯ ಸಂಭ್ರಮವನ್ನು ಪ್ರತಿಬಿಂಬಿಸುವ ಈ ಕಲಾಕೃತಿ ಇದೀಗ ಅಮೆರಿಕದ ಅಂಚೆ ಚೀಟಿಯ ಮೂಲಕ ಹೆಚ್ಚಿನ ಜನರನ್ನು ತಲುಪಲಿದೆ.

ದೀಪಾವಳಿ ಹಬ್ಬದ ಅಂಗವಾಗಿ USPS ಅಂಚೆ ಚೀಟಿ ಬಿಡುಗಡೆ ಮಾಡುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು 2016ರಲ್ಲಿ ದೀಪಾವಳಿ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗಿತ್ತು.

Share This Article