ರೊಮೇನಿಯಾದಲ್ಲಿ ಭೀಕರ ಚಂಡಮಾರುತದ ಅಬ್ಬರ; ಒಬ್ಬರು ಸಾವು, ರಾಜಧಾನಿ ಬುಕಾರೆಸ್ಟ್ ಅಸ್ತವ್ಯಸ್ತ
ರೊಮೇನಿಯಾದ ರಾಜಧಾನಿ ಬುಕಾರೆಸ್ಟ್ ಹಾಗೂ ದೇಶದ 20 ಜಿಲ್ಲೆಗಳಲ್ಲಿ ಭಾರೀ ಚಂಡಮಾರುತ ಅಪ್ಪಳಿಸಿ ವ್ಯಾಪಕ ಹಾನಿ ಉಂಟುಮಾಡಿದೆ. ಈ ದುರ್ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದು, ಅನೇಕ ಪ್ರದೇಶಗಳು ಜಲಾವೃತಗೊಂಡಿವೆ.
ತುರ್ತು ಸೇವೆಗಳ ಮಾಹಿತಿಯ ಪ್ರಕಾರ, ಬುಕಾರೆಸ್ಟ್ ನಗರದಲ್ಲೇ ಸುಮಾರು 2,000 ತುರ್ತು ಸಹಾಯ ಕರೆಗಳು ದಾಖಲಾಗಿವೆ. ಭಾರೀ ಮಳೆಯಿಂದ ನಗರದ ಹಲವು ಮೆಟ್ರೋ ನಿಲ್ದಾಣಗಳು ನೀರಿನಿಂದ ತುಂಬಿ, ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟಾಯಿತು.
ರಾಜಧಾನಿಯ ಹೊರವಲಯದಲ್ಲಿರುವ ಸುಮಾರು 60 ಪಟ್ಟಣಗಳು ಮತ್ತು ಗ್ರಾಮಗಳು ಕೂಡ ಚಂಡಮಾರುತದ ಪರಿಣಾಮಕ್ಕೆ ಒಳಗಾಗಿದ್ದು, ಡಜನ್ಗಟ್ಟಲೆ ಮನೆಗಳು ಹಾಗೂ ವಾಹನಗಳು ಹಾನಿಗೀಡಾಗಿವೆ.
ಪ್ರವಾಹಪೀಡಿತ ಪ್ರದೇಶಗಳಿಂದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಸ್ತೆಗಳ ಮೇಲೆ ಉರುಳಿಬಿದ್ದ ಮರಗಳು ಹಾಗೂ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯವೂ ಭರದಿಂದ ನಡೆಯುತ್ತಿದೆ.
ಈ ವಾರದ ಆರಂಭದಲ್ಲಿ ರೊಮೇನಿಯಾದ ಹಲವು ಭಾಗಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದ್ದರಿಂದ ವಿದ್ಯುತ್ ಬೇಡಿಕೆ ಹಾಗೂ ವಿದ್ಯುತ್ ದರಗಳು ಏರಿಕೆಯಾಗಿದ್ದವು. ತೀವ್ರ ಬಿಸಿಗಾಳಿಯ ಬೆನ್ನಲ್ಲೇ ಭಾರೀ ಚಂಡಮಾರುತ ಅಪ್ಪಳಿಸಿರುವುದು ಜನಜೀವನವನ್ನು ಮತ್ತಷ್ಟು ಅಸ್ತವ್ಯಸ್ತಗೊಳಿಸಿದೆ.


