ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ–2026ಕ್ಕೆ ಅರ್ಜಿ ಆಹ್ವಾನ; ಜುಲೈ 31 ಕೊನೆಯ ದಿನ
ಅಸಾಧಾರಣ ಸಾಧನೆ ಮಾಡಿದ 5 ರಿಂದ 18 ವರ್ಷದೊಳಗಿನ ಮಕ್ಕಳನ್ನು ಗೌರವಿಸಲು ನೀಡಲಾಗುವ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (PMRBP)–2026ಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನಾಮನಿರ್ದೇಶನಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ.
ಸಚಿವಾಲಯದ ಪ್ರಕಟಣೆಯ ಪ್ರಕಾರ, awards.gov.in ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ನಾಮನಿರ್ದೇಶನ ಸಲ್ಲಿಸಬಹುದು.
ಯಾವುದೇ ನಾಗರಿಕರು, ಶಾಲೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸಂಘ-ಸಂಸ್ಥೆಗಳು ಅರ್ಹ ಮಕ್ಕಳನ್ನು ನಾಮನಿರ್ದೇಶನ ಮಾಡಬಹುದು. ಮಕ್ಕಳು ಕೂಡ ಸ್ವಯಂ ನಾಮನಿರ್ದೇಶನ (Self-Nomination) ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.
ಕ್ರೀಡೆ, ಸಮಾಜಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಸಂರಕ್ಷಣೆ, ಕಲೆ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗುತ್ತದೆ. ಅಲ್ಲದೆ, ಅತ್ಯಂತ ಸಂಕಷ್ಟದ ಸಂದರ್ಭಗಳಲ್ಲಿ ಅಪರೂಪದ ಧೈರ್ಯ ಮತ್ತು ಸಾಹಸ ಪ್ರದರ್ಶಿಸಿದ ಮಕ್ಕಳಿಗೂ ಈ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ.
ಮಕ್ಕಳ ಪ್ರತಿಭೆ ಮತ್ತು ಸಾಧನೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಪ್ರಶಸ್ತಿಯನ್ನು ಪ್ರತಿವರ್ಷ ನೀಡುತ್ತಿದೆ.


