ವಾಷಿಂಗ್ಟನ್: ಗಾಜಾದಲ್ಲಿ ಹಮಾಸ್ ಹಾಗೂ ಇತರ ಸಶಸ್ತ್ರ ಸಂಘಟನೆಗಳ ಸಂಪೂರ್ಣ ನಿಶಸ್ತ್ರೀಕರಣ (Disarmament) ಕುರಿತಂತೆ ಮಹತ್ವದ ಒಪ್ಪಂದಕ್ಕೆ ಬರಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಟ್ರಂಪ್, ‘ಬೋರ್ಡ್ ಆಫ್ ಪೀಸ್’ ಮಧ್ಯಸ್ಥಿಕೆಯಲ್ಲಿ ಈ ಒಪ್ಪಂದಕ್ಕೆ ರೂಪ ನೀಡಲಾಗಿದ್ದು, ಗಾಜಾದಲ್ಲಿ ಹೊಸ ಪ್ಯಾಲೆಸ್ತೀನ್ ಆಡಳಿತ ಸ್ಥಾಪನೆಗೆ ಇದು ಮಹತ್ವದ ಹೆಜ್ಜೆಯಾಗಲಿದೆ ಎಂದು ಹೇಳಿದ್ದಾರೆ. ಹೊಸ ಆಡಳಿತವು ಪ್ಯಾಲೆಸ್ತೀನ್ ಜನರ ಕಲ್ಯಾಣಕ್ಕಾಗಿ ಬೋರ್ಡ್ ಆಫ್ ಪೀಸ್ ಜೊತೆಗೆ ಕಾರ್ಯನಿರ್ವಹಿಸಲಿದೆ ಎಂದೂ ಅವರು ತಿಳಿಸಿದ್ದಾರೆ.
ಇದೇ ವೇಳೆ, ಈ ಒಪ್ಪಂದದಿಂದ ಇಸ್ರೇಲ್ಗೆ ಅಗತ್ಯ ಭದ್ರತೆ ಲಭಿಸಲಿದ್ದು, ಗಾಜಾವನ್ನು ಭಯೋತ್ಪಾದನಾ ದಾಳಿಗಳ ಕೇಂದ್ರವಾಗಿ ಬಳಸಲು ಅವಕಾಶ ಇರುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಇನ್ನೊಂದೆಡೆ, ಹಮಾಸ್ನ ಹಿರಿಯ ಅಧಿಕಾರಿಯೊಬ್ಬರು ಗಾಜಾದಲ್ಲಿ ಸಂಪೂರ್ಣ ನಿಶಸ್ತ್ರೀಕರಣದ ಯೋಜನೆಗೆ ಒಪ್ಪಿಗೆ ನೀಡಿರುವುದಾಗಿ ಹೇಳಿದ್ದು, ಈ ಕುರಿತು ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ತಿಳಿಸಿದ್ದಾರೆ.
ಆದರೆ, ಈ ಒಪ್ಪಂದದ ಕುರಿತು ಇಸ್ರೇಲ್ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಶಾಂತಿ ಒಪ್ಪಂದಕ್ಕೆ ಪೂರ್ವ ಷರತ್ತಾಗಿ, ಹಮಾಸ್ನ ಸಂಪೂರ್ಣ ನಿಶಸ್ತ್ರೀಕರಣ, ಗಾಜಾದಲ್ಲಿರುವ ಎಲ್ಲಾ ಶಸ್ತ್ರಾಸ್ತ್ರಗಳ ತೆರವು ಹಾಗೂ ಪ್ರದೇಶದ ಸಂಪೂರ್ಣ ಸೈನ್ಯಮುಕ್ತೀಕರಣವನ್ನು ಇಸ್ರೇಲ್ ಬಹುಕಾಲದಿಂದ ಒತ್ತಾಯಿಸುತ್ತಿದೆ.
ಈ ನಡುವೆ, ಇಸ್ರೇಲ್ ಸೇನೆ ಗಾಜಾದಲ್ಲಿ ತನ್ನ ಸೇನಾ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ಗಾಜಾದ ಸುಮಾರು 70% ಪ್ರದೇಶದ ಮೇಲಿನ ನಿಯಂತ್ರಣವನ್ನು ವಿಸ್ತರಿಸುವ ಉದ್ದೇಶ ಹೊಂದಿರುವುದಾಗಿ ಇತ್ತೀಚೆಗೆ ತಿಳಿಸಿದ್ದಾರೆ.


