ರಿಯಾದ್: ಪಶ್ಚಿಮ ಏಷ್ಯಾದ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಹಡಗುಗಳ ಸುರಕ್ಷತೆ ಮತ್ತು ಜಾಗತಿಕ ವ್ಯಾಪಾರ ಮಾರ್ಗಗಳ ರಕ್ಷಣೆಯನ್ನು ಬಲಪಡಿಸುವ ಉದ್ದೇಶದಿಂದ ಸೌದಿ ಅರೇಬಿಯಾ ಸೇರಿದಂತೆ 14 ರಾಷ್ಟ್ರಗಳು ಬಹುರಾಷ್ಟ್ರೀಯ ಸಮುದ್ರ ಭದ್ರತಾ ಮೈತ್ರಿಕೂಟ (Multinational Maritime Defence Coalition) ರಚಿಸಿವೆ.
ರಿಯಾದ್ನಲ್ಲಿ ವಿವಿಧ ರಾಷ್ಟ್ರಗಳ ಸೇನಾ ಅಧಿಕಾರಿಗಳ ಸಭೆಯ ಬಳಿಕ ಈ ಮಹತ್ವದ ಘೋಷಣೆ ಮಾಡಲಾಗಿದೆ. ಮೈತ್ರಿಕೂಟ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯ ಪ್ರಕಾರ, ಜಾಗತಿಕ ಸಮುದ್ರ ಭದ್ರತೆಗೆ ಎದುರಾಗುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವುದು ಈ ಒಕ್ಕೂಟದ ಪ್ರಮುಖ ಉದ್ದೇಶವಾಗಿದೆ.
ಈ ಮೈತ್ರಿಕೂಟವು ಸಮುದ್ರ ಭದ್ರತಾ ಸಹಕಾರಕ್ಕೆ ವೇದಿಕೆಯಾಗಲಿದ್ದು, ಹಡಗುಗಳ ಮುಕ್ತ ಸಂಚಾರ, ಅಂತರರಾಷ್ಟ್ರೀಯ ವ್ಯಾಪಾರ ಮಾರ್ಗಗಳು ಹಾಗೂ ಇಂಧನ ಪೂರೈಕೆ ಮಾರ್ಗಗಳ ಭದ್ರತೆಯನ್ನು ಇನ್ನಷ್ಟು ಬಲಪಡಿಸುವತ್ತ ಗಮನಹರಿಸಲಿದೆ.
ವಿಶೇಷವಾಗಿ ಬಾಬ್ ಅಲ್-ಮಂದೆಬ್ ಜಲಸಂಧಿ, ಕೆಂಪು ಸಮುದ್ರ (Red Sea) ಹಾಗೂ ಏಡನ್ ಕೊಲ್ಲಿ (Gulf of Aden) ಪ್ರದೇಶಗಳಲ್ಲಿ ಸಾಮೂಹಿಕ ಸಮುದ್ರ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ಈ ಮೈತ್ರಿಕೂಟ ಕಾರ್ಯನಿರ್ವಹಿಸಲಿದೆ. ಇದರ ಎಲ್ಲಾ ಚಟುವಟಿಕೆಗಳು ಅಂತರರಾಷ್ಟ್ರೀಯ ಕಾನೂನಿನ ನಿಯಮಗಳಿಗೆ ಅನುಗುಣವಾಗಿರಲಿವೆ ಎಂದು ತಿಳಿಸಲಾಗಿದೆ.
ಮೈತ್ರಿಕೂಟದ ಸಂಸ್ಥಾಪಕ ಸದಸ್ಯ ರಾಷ್ಟ್ರಗಳಲ್ಲಿ ಸೌದಿ ಅರೇಬಿಯಾ, ಕುವೈತ್, ಬಹ್ರೇನ್, ಕತಾರ್, ಈಜಿಪ್ಟ್, ಜೋರ್ಡಾನ್, ಯೆಮೆನ್, ನೈಜೀರಿಯಾ, ಸುಡಾನ್, ಜಿಬೂಟಿ ಮತ್ತು ಸೋಮಾಲಿಯಾ ಸೇರಿದಂತೆ ಒಟ್ಟು 14 ರಾಷ್ಟ್ರಗಳು ಸೇರಿವೆ.
ಸದಸ್ಯ ರಾಷ್ಟ್ರಗಳು ಈ ಮೈತ್ರಿಕೂಟವು ಸಂಪೂರ್ಣವಾಗಿ ರಕ್ಷಣಾತ್ಮಕ ಉದ್ದೇಶ ಹೊಂದಿದ್ದು, ಯಾವುದೇ ದೇಶ, ಮೈತ್ರಿಕೂಟ ಅಥವಾ ಅಂತರರಾಷ್ಟ್ರೀಯ ಸಂಸ್ಥೆಯನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿವೆ. ಅಲ್ಲದೆ, ಸೌದಿ ಅರೇಬಿಯಾ ಈ ಮೈತ್ರಿಕೂಟದ ಸ್ಥಾಪಕ ಹಾಗೂ ನೇತೃತ್ವ ವಹಿಸುವ ರಾಷ್ಟ್ರವಾಗಿದ್ದು, ಅದರ ಶಾಶ್ವತ ಕೇಂದ್ರ ಕಚೇರಿ ಸೌದಿ ಅರೇಬಿಯಾದಲ್ಲೇ ಇರಲಿದೆ ಎಂದು ಘೋಷಿಸಲಾಗಿದೆ.


