ಪ್ಯಾರಿಸ್: ದಾಖಲೆಯ ಮಟ್ಟದ ಉಷ್ಣ ಅಲೆಯ ಅಬ್ಬರಕ್ಕೆ ತತ್ತರಿಸಿರುವ ಫ್ರಾನ್ಸ್‌ನಲ್ಲಿ ಸಾವಿನ ಸಂಖ್ಯೆ ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗಿದೆ. ಜೂನ್ 22ರಿಂದ 28ರವರೆಗೆ ಒಂದೇ ವಾರದಲ್ಲಿ ಸುಮಾರು 9 ಸಾವಿರ ಮಂದಿ ಮೃತಪಟ್ಟಿದ್ದಾರೆ ಎಂದು ಫ್ರಾನ್ಸ್ ಸಾರ್ವಜನಿಕ ಆರೋಗ್ಯ ಇಲಾಖೆ (Public Health France) ತಿಳಿಸಿದೆ.
ಈ ಅವಧಿಯ ಸಾವಿನ ಪ್ರಮಾಣ ಹಿಂದಿನ ವಾರದೊಂದಿಗೆ ಹೋಲಿಸಿದರೆ ಶೇ.29ರಷ್ಟು ಹೆಚ್ಚಾಗಿದ್ದು, ಕನಿಷ್ಠ 2 ಸಾವಿರ ಹೆಚ್ಚುವರಿ ಸಾವುಗಳು ಸಂಭವಿಸಿವೆ ಎಂದು ಅಂದಾಜಿಸಲಾಗಿದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪ್ರಾಥಮಿಕ ಅಂಕಿ-ಅಂಶಗಳು ಇನ್ನೂ ಪೂರ್ಣಗೊಂಡಿಲ್ಲ. ಅಂತಿಮ ವರದಿಯಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷವಾಗಿ ಪ್ಯಾರಿಸ್ ಪ್ರದೇಶದಲ್ಲಿ ಸಾವಿನ ಪ್ರಮಾಣ ಅತ್ಯಧಿಕವಾಗಿ ಏರಿಕೆಯಾಗಿದೆ. ಖಾಸಗಿ ನಿವಾಸಗಳು, ಆಸ್ಪತ್ರೆಗಳು ಹಾಗೂ ವೃದ್ಧಾಶ್ರಮಗಳಲ್ಲಿ ಮೃತಪಟ್ಟವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ.
ಖಾಸಗಿ ಮನೆಗಳಲ್ಲಿ ಸಂಭವಿಸಿದ ಸಾವುಗಳು ಶೇ.91ರಷ್ಟು, ವೃದ್ಧಾಶ್ರಮಗಳಲ್ಲಿ ಶೇ.37ರಷ್ಟು ಹಾಗೂ ಆಸ್ಪತ್ರೆಗಳಲ್ಲಿ ಸುಮಾರು ಶೇ.20ರಷ್ಟು ಹೆಚ್ಚಳ ಕಂಡಿದೆ.
ಇದೇ ವೇಳೆ, ನಿರ್ಜಲೀಕರಣ, ಹೃದಯಾಘಾತ, ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳು ಹಾಗೂ ತೀವ್ರ ಬಿಸಿಲಿನಿಂದ ಉಂಟಾಗುವ ಆರೋಗ್ಯ ತೊಂದರೆಗಳಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಆಸ್ಪತ್ರೆಗಳಲ್ಲಿ ಗಣನೀಯವಾಗಿ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.


