ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 30 ಮತ್ತು 31ರಂದು ಎರಡು ದಿನಗಳ ಗುಜರಾತ್ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭದಲ್ಲಿ ₹14,400 ಕೋಟಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಲೋಕಾರ್ಪಣೆ ನೆರವೇರಿಸಲಿದ್ದಾರೆ. ಇದೇ ವೇಳೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 24ನೇ ಕಂತಿನಡಿ ದೇಶದ ರೈತರಿಗೆ ಸುಮಾರು ₹19,000 ಕೋಟಿ ಆರ್ಥಿಕ ನೆರವನ್ನು ಬಿಡುಗಡೆ ಮಾಡಲಿದ್ದಾರೆ.
ಪ್ರವಾಸದ ಮೊದಲ ದಿನವಾದ ಇಂದು ಬನಸ್ಕಾಂಠ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ, ಅಹಮದಾಬಾದ್ ಮೆಟ್ರೋ ಎರಡನೇ ಹಂತದ 2A (ವಿಮಾನ ನಿಲ್ದಾಣ ವಿಸ್ತರಣೆ) ಮತ್ತು 2B (ಗಿಫ್ಟ್ ಸಿಟಿ ವಿಸ್ತರಣೆ) ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇದಲ್ಲದೆ, ಬನಸ್ಕಾಂಠದಲ್ಲಿರುವ ಭ್ರೂಣ ವರ್ಗಾವಣೆ ತಂತ್ರಜ್ಞಾನ ಮತ್ತು ಪ್ರನಾಳೀಯ ನಿಷೇಚನ (ET-IVF) ಪ್ರಯೋಗಾಲಯ ಹಾಗೂ ಭಾರತ್ ಬೋವೈನ್ ಬ್ರೀಡಿಂಗ್ ಆ್ಯಂಡ್ ರಿಸರ್ಚ್ ಸೆಂಟರ್ನ ಜಾನುವಾರು ಕೇಂದ್ರಕ್ಕೂ ಭೇಟಿ ನೀಡಲಿದ್ದಾರೆ. ಈ ಸಂಶೋಧನಾ ಕೇಂದ್ರವು ಜಾನುವಾರು ತಳಿಗಳ ಅಭಿವೃದ್ಧಿ, ಆನುವಂಶಿಕ ಸುಧಾರಣೆ ಮತ್ತು ಆಧುನಿಕ ಸಂತಾನೋತ್ಪತ್ತಿ ತಂತ್ರಜ್ಞಾನಗಳಿಗೆ ಉತ್ತೇಜನ ನೀಡಲಿದೆ. ಇದರಿಂದ ತಳಿಗಳ ಸುಧಾರಣೆಯ ವೇಗವನ್ನು 10ರಿಂದ 20 ಪಟ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ.
ಕೃಷಿ ಮೂಲಸೌಕರ್ಯ, ಶೀತಲ ಸಂಗ್ರಹಣಾ ಘಟಕಗಳು, ಗೋದಾಮುಗಳು, ಆಹಾರ ಸಂಸ್ಕರಣಾ ವ್ಯವಸ್ಥೆಗಳು ಹಾಗೂ ತೋಟಗಾರಿಕೆ ಯೋಜನೆಗಳಿಗೂ ಈ ಪ್ರವಾಸದಲ್ಲಿ ಆದ್ಯತೆ ನೀಡಲಾಗಿದೆ. ಜತೆಗೆ, ಎರಡು ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.
ಏಕತಾ ನಗರದಲ್ಲಿ ಭಾರತ್ ಪರ್ವ ಉದ್ಘಾಟನೆ
ಬನಸ್ಕಾಂಠ ಕಾರ್ಯಕ್ರಮಗಳ ಬಳಿಕ ಪ್ರಧಾನಿ ಏಕತಾ ನಗರಕ್ಕೆ ತೆರಳಿ ‘ಭಾರತ್ ಪರ್ವ 2026’ಕ್ಕೆ ಚಾಲನೆ ನೀಡಲಿದ್ದಾರೆ. ಭಾರತದ ಸಾಂಸ್ಕೃತಿಕ ವೈವಿಧ್ಯ ಮತ್ತು ರಾಷ್ಟ್ರೀಯ ಏಕತೆಯನ್ನು ಪ್ರತಿಬಿಂಬಿಸುವ ಈ ಉತ್ಸವದಲ್ಲಿ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಲೆ, ಸಂಸ್ಕೃತಿ, ಆಹಾರ ಪದ್ಧತಿ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ನಡೆಯಲಿದೆ.
ಪ್ರವಾಸದ ಎರಡನೇ ದಿನವಾದ ಅಕ್ಟೋಬರ್ 31ರಂದು ಏಕತಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಿರುವ ಮೋದಿ, ಏಕತಾ ನಗರದಲ್ಲಿ ₹400 ಕೋಟಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ. ಒಳಚರಂಡಿ ಮತ್ತು ನೀರು ಸಂಸ್ಕರಣಾ ಘಟಕ, ನರ್ಮದಾ ಘಾಟ್ನ ಉನ್ನತೀಕರಣ, ಕಟ್ಟಡಗಳ ಮುಂಭಾಗದ ಬೆಳಕಿನ ವ್ಯವಸ್ಥೆ ಹಾಗೂ ಮಳೆಕಾಡು ಸೇರಿದಂತೆ ಹಲವು ಯೋಜನೆಗಳು ಇದರಲ್ಲಿ ಸೇರಿವೆ.
ನಂತರ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 151ನೇ ಜನ್ಮಜಯಂತಿ ಅಂಗವಾಗಿ ನಡೆಯುವ ರಾಷ್ಟ್ರೀಯ ಏಕತಾ ದಿನಾಚರಣೆಯಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ.


