ಎವಿಯನ್ (ಫ್ರಾನ್ಸ್): ಪ್ರಧಾನಿ ನರೇಂದ್ರ ಮೋದಿ ಇಂದು ಫ್ರಾನ್ಸ್‌ನ ಎವಿಯನ್ ನಗರಕ್ಕೆ ಆಗಮಿಸಲಿದ್ದು, ಜಿ7 ಶೃಂಗಸಭೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಎರಡು ರಾಷ್ಟ್ರಗಳ ಪ್ರವಾಸದ ಮೂರನೇ ಹಂತಕ್ಕೆ ಚಾಲನೆ ನೀಡಲಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ಆಹ್ವಾನದ ಮೇರೆಗೆ ನಡೆಯುತ್ತಿರುವ ಈ ಭೇಟಿ ರಾಜತಾಂತ್ರಿಕ ಹಾಗೂ ಆರ್ಥಿಕ ದೃಷ್ಟಿಯಿಂದ ಮಹತ್ವದ್ದಾಗಿದೆ.
ಎವಿಯನ್ ತಲುಪಿದ ಬಳಿಕ ಪ್ರಧಾನಿ ಮೋದಿಯನ್ನು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಅಧಿಕೃತವಾಗಿ ಸ್ವಾಗತಿಸಲಿದ್ದಾರೆ. ಬಳಿಕ ಅವರು “ಹೊಸ ಸಹಭಾಗಿತ್ವಗಳ ನಿರ್ಮಾಣ ಮತ್ತು ಅಂತರರಾಷ್ಟ್ರೀಯ ಐಕ್ಯತೆಯ ಪುನರ್‌ನಿರ್ಮಾಣ” (Forging New Partnerships and Rebuilding International Solidarity) ಎಂಬ ವಿಷಯದಡಿ ನಡೆಯಲಿರುವ ಜಿ7 ಶೃಂಗಸಭೆಯ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಲಿದ್ದಾರೆ.
ಈ ಸಭೆಯಲ್ಲಿ ಜಿ7 ರಾಷ್ಟ್ರಗಳ ನಾಯಕರು, ಆಹ್ವಾನಿತ ಪಾಲುದಾರ ರಾಷ್ಟ್ರಗಳ ಪ್ರತಿನಿಧಿಗಳು, ವಿಶ್ವ ಬ್ಯಾಂಕ್ ಹಾಗೂ ಆಫ್ರಿಕನ್ ಡೆವಲಪ್‌ಮೆಂಟ್ ಬ್ಯಾಂಕ್ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಶೃಂಗಸಭೆಯ ವೇಳೆ ಪ್ರಧಾನಿ ಮೋದಿ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆ ಇದೆ.
ನಂತರ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಆಯೋಜಿಸಿರುವ ವಿಶೇಷ ಔತಣಕೂಟದಲ್ಲೂ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.
ಭಾರತದ ಪಾಲಿಗೆ ಇದು ಜಿ7 ಶೃಂಗಸಭೆಯಲ್ಲಿ 13ನೇ ಭಾಗವಹಿಸುವಿಕೆಯಾಗಿದ್ದು, ಪ್ರಧಾನಿ ಮೋದಿಯವರ ಸತತ ಏಳನೇ ಪಾಲ್ಗೊಳ್ಳುವಿಕೆಯಾಗಿರುವುದು ವಿಶೇಷ. ಜಾಗತಿಕ ಶಾಂತಿ, ಭದ್ರತೆ, ಸುಸ್ಥಿರ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಯಂತಹ ವಿಷಯಗಳಲ್ಲಿ ಭಾರತ ವಹಿಸುತ್ತಿರುವ ಪ್ರಮುಖ ಪಾತ್ರಕ್ಕೆ ಇದು ಸಾಕ್ಷಿಯಾಗಿದೆ.
ಇತ್ತೀಚೆಗೆ ಭಾರತ-ಯುರೋಪಿಯನ್ ಒಕ್ಕೂಟದ ವ್ಯಾಪಾರ ಒಪ್ಪಂದ, ನೈಸ್‌ನಲ್ಲಿ ನಡೆದ ‘ಭಾರತ್ ಇನೋವೇಟ್ಸ್’ ಕಾರ್ಯಕ್ರಮ ಹಾಗೂ ಪ್ಯಾರಿಸ್‌ನಲ್ಲಿ ನಡೆಯಲಿರುವ ‘ವಿವಾಟೆಕ್’ ತಂತ್ರಜ್ಞಾನ ಸಮಾವೇಶದಲ್ಲಿ ಭಾರತಕ್ಕೆ ದೊರೆತಿರುವ ಪ್ರಮುಖ ಸ್ಥಾನಮಾನಗಳು ಜಾಗತಿಕ ಮಟ್ಟದಲ್ಲಿ ಭಾರತದ ಪ್ರಾಮುಖ್ಯತೆಯನ್ನು ಮತ್ತಷ್ಟು ಹೆಚ್ಚಿಸಿವೆ.
ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI), ನವೋದ್ಯಮ, ಉತ್ಪಾದನೆ ಹಾಗೂ ಬಲಿಷ್ಠ ಸರಬರಾಜು ಸರಪಳಿಗಳ ಕ್ಷೇತ್ರಗಳಲ್ಲಿ ಭಾರತವನ್ನು ವಿಶ್ವಾಸಾರ್ಹ ಪಾಲುದಾರ ರಾಷ್ಟ್ರವಾಗಿ ಜಿ7 ರಾಷ್ಟ್ರಗಳು ಪರಿಗಣಿಸುತ್ತಿವೆ. ಫ್ರೆಂಚ್ ಅಧ್ಯಕ್ಷತೆಯ ಜಿ7 ಶೃಂಗಸಭೆಯ ಪ್ರಮುಖ ಆದ್ಯತೆಗಳಾದ ಆರ್ಥಿಕ ಸಮತೋಲನ, ಅಂತರರಾಷ್ಟ್ರೀಯ ಸಹಭಾಗಿತ್ವ ಹಾಗೂ ಕೃತಕ ಬುದ್ಧಿಮತ್ತೆ ಕುರಿತ ಚರ್ಚೆಗಳು ಭಾರತದ ಹಿತಾಸಕ್ತಿಗಳಿಗೆ ನಿಕಟವಾಗಿ ಹೊಂದಿಕೆಯಾಗಿವೆ.


