ಚೆನ್ನೈ: ಈ ವರ್ಷ ಸಂಭವಿಸುವ ಸಾಧ್ಯತೆಯಿರುವ ಪ್ರಬಲ ಎಲ್ ನಿನೋ (El Niño) ಹವಾಮಾನ ವಿದ್ಯಮಾನದ ಪರಿಣಾಮವನ್ನು ಅಂದಾಜಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ತಮಿಳುನಾಡು ಸರ್ಕಾರ ತಜ್ಞರ ಸಲಹಾ ಸಮಿತಿ (Expert Advisory Committee) ರಚಿಸಿದೆ.
ಈ ಕುರಿತು ರಾಜ್ಯದ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಅಧಿಕೃತ ಆದೇಶ ಹೊರಡಿಸಿದ್ದು, ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ ಎಲ್ ನಿನೋದಿಂದ ಉಂಟಾಗಬಹುದಾದ ಪರಿಣಾಮಗಳನ್ನು ಮೌಲ್ಯಮಾಪನ ಮಾಡಿ, ಅಪಾಯ ತಡೆ ಹಾಗೂ ಪರಿಹಾರ ಕ್ರಮಗಳ ಕುರಿತು ಸರ್ಕಾರಕ್ಕೆ ಶಿಫಾರಸು ಸಲ್ಲಿಸುವ ಜವಾಬ್ದಾರಿಯನ್ನು ಸಮಿತಿಗೆ ನೀಡಲಾಗಿದೆ.
ಈ ತಜ್ಞರ ಸಲಹಾ ಸಮಿತಿ 2026–27 ಹಾಗೂ 2027–28 ಅವಧಿಯಲ್ಲಿ ಕಾರ್ಯನಿರ್ವಹಿಸಲಿದೆ.
ಸಮಿತಿಯ ನೇತೃತ್ವವನ್ನು ಅಣ್ಣಾ ವಿಶ್ವವಿದ್ಯಾಲಯದ ಹವಾಮಾನ ಬದಲಾವಣೆ ಮತ್ತು ವಿಪತ್ತು ನಿರ್ವಹಣಾ ಕೇಂದ್ರದ ಮುಖ್ಯಸ್ಥರು ವಹಿಸಲಿದ್ದಾರೆ. ಸಮಿತಿಯಲ್ಲಿ ಖ್ಯಾತ ಹವಾಮಾನ ಸಂಶೋಧಕ ಪ್ರದೀಪ್ ಜಾನ್, ತಮಿಳುನಾಡು ಅರ್ಬನ್ ಇನ್ಫ್ರಾಸ್ಟ್ರಕ್ಚರ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ ವ್ಯವಸ್ಥಾಪಕರು ಸೇರಿದಂತೆ ಒಟ್ಟು ಏಳು ಸದಸ್ಯರು ಇದ್ದಾರೆ.
ಇದಲ್ಲದೆ, ಐಐಟಿ (IIT) ಹಾಗೂ ಪರಿಸರ ಮತ್ತು ಹವಾಮಾನ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಇತರ ಸಂಸ್ಥೆಗಳ ತಜ್ಞರೂ ಸಮಿತಿಯ ಸದಸ್ಯರಾಗಿದ್ದಾರೆ.
ರಾಜ್ಯದಲ್ಲಿ ಎಲ್ ನಿನೋದಿಂದ ಉಂಟಾಗಬಹುದಾದ ಮಳೆ, ತಾಪಮಾನ ಹಾಗೂ ಪ್ರಕೃತಿ ವಿಕೋಪಗಳ ಪರಿಣಾಮವನ್ನು ಮುಂಚಿತವಾಗಿ ಅಂದಾಜಿಸಿ, ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಈ ಸಮಿತಿಯನ್ನು ರಚಿಸಲಾಗಿದೆ.


