ಚೀನಾ, ಟಿಬೆಟ್ ಮತ್ತು ನೇಪಾಳದಲ್ಲಿ ಸರಣಿ ಭೂಕಂಪ: ಗರಿಷ್ಠ 4.5 ತೀವ್ರತೆಯ ಕಂಪನ ದಾಖಲು

1 Min Read
1 Min Read

ಬೀಜಿಂಗ್/ಕಠ್ಮಂಡು: ಚೀನಾ, ಟಿಬೆಟ್ ಹಾಗೂ ನೇಪಾಳದಲ್ಲಿ ಶುಕ್ರವಾರ ಮುಂಜಾನೆ ಕೆಲವೇ ಗಂಟೆಗಳ ಅಂತರದಲ್ಲಿ ಸರಣಿ ಭೂಕಂಪಗಳು ಸಂಭವಿಸಿವೆ. ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಮಾಹಿತಿ ಪ್ರಕಾರ, ಅತ್ಯಂತ ಪ್ರಬಲ ಭೂಕಂಪವು ಚೀನಾದಲ್ಲಿ ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆ ದಾಖಲಿಸಿದೆ.

ಎನ್‌ಸಿಎಸ್‌ ಮಾಹಿತಿ ಪ್ರಕಾರ, ಚೀನಾದಲ್ಲಿ ಸಂಭವಿಸಿದ 4.5 ತೀವ್ರತೆಯ ಭೂಕಂಪವು 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ.

ಇದಕ್ಕೂ ಮುನ್ನ ಭಾರತೀಯ ಕಾಲಮಾನ ರಾತ್ರಿ 12.50ಕ್ಕೆ ಟಿಬೆಟ್‌ನಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಬಳಿಕ ರಾತ್ರಿ 1.18ಕ್ಕೆ ನೇಪಾಳದಲ್ಲಿ 3.4 ತೀವ್ರತೆಯ ಭೂಕಂಪ ದಾಖಲಾಗಿತು. ಅದಕ್ಕೂ ಮೊದಲು ಗುರುವಾರ ರಾತ್ರಿ 11.25ಕ್ಕೆ ಟಿಬೆಟ್‌ನಲ್ಲಿ 4.3 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿತ್ತು.

ಈ ನಾಲ್ಕು ಭೂಕಂಪಗಳು ಹಿಮಾಲಯ ಪ್ರದೇಶ ಹಾಗೂ ಪಶ್ಚಿಮ ಚೀನಾದ ವಿವಿಧ ಭಾಗಗಳಲ್ಲಿ ಸಂಭವಿಸಿದ್ದು, ಅವುಗಳ ಕೇಂದ್ರಬಿಂದುಗಳು 10 ಕಿ.ಮೀ.ದಿಂದ 130 ಕಿ.ಮೀ. ಆಳದವರೆಗೆ ದಾಖಲಾಗಿವೆ.

ಭೂಕಂಪಗಳಿಂದ ತಕ್ಷಣಕ್ಕೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿ ಸಂಭವಿಸಿರುವ ವರದಿಗಳು ಲಭ್ಯವಾಗಿಲ್ಲ. ಅಲ್ಲದೆ, ಅಧಿಕಾರಿಗಳು ಯಾವುದೇ ತುರ್ತು ಎಚ್ಚರಿಕೆ ಅಥವಾ ಸುನಾಮಿ ಎಚ್ಚರಿಕೆಯನ್ನು ಹೊರಡಿಸಿಲ್ಲ.

ಭಾರತೀಯ ಮತ್ತು ಯುರೇಷಿಯನ್ ಟೆಕ್ಟೋನಿಕ್ ಫಲಕಗಳ ನಿರಂತರ ಘರ್ಷಣೆಯಿಂದಾಗಿ ಹಿಮಾಲಯ ಪ್ರದೇಶವು ವಿಶ್ವದ ಅತ್ಯಂತ ಭೂಕಂಪ ಸಂಭವನೀಯ ವಲಯಗಳಲ್ಲಿ ಒಂದಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

Share This Article