ವಾಷಿಂಗ್ಟನ್: ಅಮೆರಿಕದಲ್ಲಿ ಜನಿಸುವ ಮಕ್ಕಳಿಗೆ ಸಿಗುವ ಜನ್ಮಸಿದ್ಧ ಪೌರತ್ವವನ್ನು (Birthright Citizenship) ಸೀಮಿತಗೊಳಿಸುವ ಟ್ರಂಪ್ ಆಡಳಿತದ ಹೊಸ ಪ್ರಯತ್ನಕ್ಕೆ ಫೆಡರಲ್ ನ್ಯಾಯಾಲಯ ತಡೆ ನೀಡಿದೆ.
ಅಮೆರಿಕದ ಜಿಲ್ಲಾ ನ್ಯಾಯಾಧೀಶೆ ಡೆಬೊರಾ ಬೋರ್ಡ್‌ಮನ್ ಅವರು ಮಧ್ಯಂತರ ತಡೆಯಾಜ್ಞೆ (Preliminary Injunction) ಹೊರಡಿಸಿದ್ದು, ಹೊಸ ಆದೇಶವು ಅಮೆರಿಕ ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ವಲಸಿಗರ ಹಕ್ಕುಗಳ ಪರ ಹೋರಾಡುತ್ತಿರುವ ಸಂಘಟನೆಗಳು ವಾದಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಈ ತೀರ್ಪು, ಅಮೆರಿಕ ಸುಪ್ರೀಂ ಕೋರ್ಟ್ ಜೂನ್ 30ರಂದು ನೀಡಿದ್ದ ಮಹತ್ವದ ತೀರ್ಪಿನ ಬೆನ್ನಲ್ಲೇ ಬಂದಿದೆ. 2025ರಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ್ದ ಆರಂಭಿಕ ಕಾರ್ಯಕಾರಿ ಆದೇಶವು ಅಮೆರಿಕ ಸಂವಿಧಾನದ 14ನೇ ತಿದ್ದುಪಡಿಯೊಂದಿಗೆ ಸಂಘರ್ಷದಲ್ಲಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಅಮೆರಿಕ ನೆಲದಲ್ಲಿ ಜನಿಸುವ ಮಕ್ಕಳಿಗೆ ಅವರ ಪೋಷಕರ ವಲಸೆ ಸ್ಥಿತಿ ಏನೇ ಆಗಿದ್ದರೂ ಪೌರತ್ವದ ಹಕ್ಕು ನೀಡುವ ಸಂವಿಧಾನಾತ್ಮಕ ವ್ಯವಸ್ಥೆಗೆ ಈ ತಿದ್ದುಪಡಿ ಆಧಾರವಾಗಿದೆ.
ಹೊಸ ಆದೇಶದಲ್ಲೂ ಹಲವು ನಿರ್ಬಂಧ
ಸುಪ್ರೀಂ ಕೋರ್ಟ್‌ನ ತೀರ್ಪಿನ ಬಳಿಕ ಅಧ್ಯಕ್ಷ ಟ್ರಂಪ್ ಆಗಸ್ಟ್ 6ರಂದು ಪರಿಷ್ಕೃತ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದರು. ಈ ಬಾರಿ ‘ಬರ್ತ್ ಟೂರಿಸಂ’ ನಿಯಂತ್ರಿಸುವುದರ ಜೊತೆಗೆ, ವಿದೇಶಿ ಸರ್ಕಾರಗಳ ಉದ್ಯೋಗಿಗಳ ಮಕ್ಕಳು, ವಲಸೆ ವಂಚನೆಯಲ್ಲಿ ತೊಡಗಿರುವವರ ಮಕ್ಕಳು ಹಾಗೂ ‘ವಿದೇಶಿ ಶತ್ರುಗಳು’ ಎಂದು ವರ್ಗೀಕರಿಸಲಾದ ವ್ಯಕ್ತಿಗಳ ಮಕ್ಕಳಿಗೆ ಪೌರತ್ವ ನಿರಾಕರಿಸುವ ಉದ್ದೇಶವನ್ನು ಆದೇಶ ಹೊಂದಿತ್ತು.
ಆದರೆ, ಈ ನಿರ್ಬಂಧಗಳಿಂದ ಪರಿಣಾಮಕ್ಕೊಳಗಾಗಬಹುದಾದ ಶಿಶುಗಳ ಪರ ವಕೀಲರು ನ್ಯಾಯಾಲಯದ ಮೊರೆ ಹೋಗಿ ತಕ್ಷಣದ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದರು.
ಸರ್ಕಾರಿ ಸಂಸ್ಥೆಗಳಿಗೆ ನಿರ್ಬಂಧ
ನ್ಯಾಯಾಧೀಶೆ ಬೋರ್ಡ್‌ಮನ್ ಅವರ ಹೊಸ ಆದೇಶದ ಪರಿಣಾಮ, ಕಾನೂನು ಹೋರಾಟ ಮುಂದುವರಿಯುವ ಅವಧಿಯಲ್ಲಿ ಅಮೆರಿಕದ ವಿದೇಶಾಂಗ ಇಲಾಖೆ, ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಹಾಗೂ ಸಾಮಾಜಿಕ ಭದ್ರತಾ ಆಡಳಿತ ಸೇರಿದಂತೆ ಸರ್ಕಾರಿ ಸಂಸ್ಥೆಗಳು ಈ ಮಕ್ಕಳ ಪೌರತ್ವವನ್ನು ನಿರಾಕರಿಸುವುದು ಅಥವಾ ಅದಕ್ಕೆ ಅಡ್ಡಿಪಡಿಸುವುದನ್ನು ತಡೆಯಲಾಗಿದೆ.
ಹೀಗಾಗಿ, ಜನ್ಮಸಿದ್ಧ ಪೌರತ್ವದ ವಿಚಾರದಲ್ಲಿ ಟ್ರಂಪ್ ಆಡಳಿತ ಮತ್ತು ನ್ಯಾಯಾಂಗದ ನಡುವಿನ ಕಾನೂನು ಸಮರ ಮತ್ತಷ್ಟು ತೀವ್ರಗೊಂಡಿದೆ.


