ಕಠ್ಮಂಡು: ನೇಪಾಳ ಮತ್ತು ಟಿಬೆಟ್‌ನಲ್ಲಿ ಭಾರೀ ಅನಾಹುತ ಸೃಷ್ಟಿಸಿರುವ ಹಠಾತ್ ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 1,250ಕ್ಕೆ ಏರಿಕೆಯಾಗಿದೆ. ಭಾರಿ ಮಳೆ ಹಾಗೂ ಪ್ರವಾಹದ ಅವಶೇಷಗಳ ನಡುವೆ ರಕ್ಷಣಾ ಸಿಬ್ಬಂದಿ ಸಿಲುಕಿರುವವರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಭೋಟೆಕೋಶಿ ನದಿಯ ಮಾರ್ಗದಲ್ಲಿರುವ ಸುರಂಗಗಳು ಹಾಗೂ ಭೂಗತ ವಿದ್ಯುತ್ ಸ್ಥಾವರಗಳಲ್ಲಿ ಹಲವರು ಸಿಲುಕಿರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರು, ಹಿಮಾಲಯ ಪ್ರದೇಶದಲ್ಲಿ ಇಂತಹ ವಿಪತ್ತುಗಳ ಅಪಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹವಾಮಾನ ಬದಲಾವಣೆಯ ಪರಿಣಾಮದ ಕುರಿತು ಅಂತರರಾಷ್ಟ್ರೀಯ ಸಮುದಾಯದ ಗಮನವನ್ನು ಗಂಭೀರವಾಗಿ ಸೆಳೆಯಬೇಕಿದೆ ಎಂದು ಹೇಳಿದ್ದಾರೆ.
ಕಳೆದ ವಾರ ಸಂಭವಿಸಿದ ಪ್ರವಾಹದಲ್ಲಿ ನಾಪತ್ತೆಯಾಗಿರುವ ಸ್ಥಳೀಯರ ಕುಟುಂಬಗಳು ಸಾಂಕೇತಿಕ ಅಂತ್ಯಕ್ರಿಯೆಗಳನ್ನು ನಡೆಸುತ್ತಿರುವ ನಡುವೆಯೇ, ನಾಪತ್ತೆಯಾದವರ ಪೈಕಿ 583 ಮಂದಿ ವಿದೇಶಿಯರು ಎಂದು ತಿಳಿದುಬಂದಿದೆ.
11,993 ಮಂದಿಯ ರಕ್ಷಣೆ
ನೇಪಾಳ ಸೇನೆ ಸೇರಿದಂತೆ ವಿವಿಧ ಭದ್ರತಾ ಪಡೆಗಳ ಸಿಬ್ಬಂದಿ ಹೆಲಿಕಾಪ್ಟರ್‌ಗಳು ಹಾಗೂ ಭೂ ಮಾರ್ಗಗಳ ಮೂಲಕ ಇದುವರೆಗೆ 11,993 ಮಂದಿಯನ್ನು ರಕ್ಷಿಸಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಸುಮಾರು 21,314 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಟಿಬೆಟ್‌ನಲ್ಲೂ ಸಾವಿನ ಸಂಖ್ಯೆ ಏರಿಕೆ
ನೇಪಾಳ ಗಡಿಯ ಸಮೀಪದ ಟಿಬೆಟ್‌ನ ಗ್ಯಿರೋಂಗ್ ಕೌಂಟಿಯಲ್ಲಿ ಸಂಭವಿಸಿದ ಪ್ರವಾಹದಿಂದ ಚೀನಾದ ಭಾಗದಲ್ಲೂ ಸಾವಿನ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಇನ್ನೂ 541 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ನೇಪಾಳ ಸಂಸತ್ತಿನ ಪ್ರತಿನಿಧಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಶಾ, ವಿಪತ್ತಿನ ಪ್ರಮಾಣ ಮತ್ತು ಸ್ವರೂಪವು ಹಿಮಾಲಯ ಪ್ರದೇಶದಲ್ಲಿ ವಾಸಿಸುವ ಜನರು ಹವಾಮಾನ ಬದಲಾವಣೆಯಿಂದ ಎದುರಿಸುತ್ತಿರುವ ಹೆಚ್ಚುತ್ತಿರುವ ಅಪಾಯಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಹೇಳಿದ್ದಾರೆ.
ಅಂತರರಾಷ್ಟ್ರೀಯ ನೆರವಿಗೆ ಮುಂದಾದ ಸಂಸ್ಥೆಗಳು
ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್, ವಿಶ್ವ ಬ್ಯಾಂಕ್, ಯುರೋಪಿಯನ್ ಒಕ್ಕೂಟ ಮತ್ತು ವಿಶ್ವಸಂಸ್ಥೆ ಸೇರಿದಂತೆ ಹಲವು ಅಂತರರಾಷ್ಟ್ರೀಯ ಅಭಿವೃದ್ಧಿ ಪಾಲುದಾರರು ನೆರವಿನ ಭರವಸೆ ನೀಡಿದ್ದಾರೆ.
ಇದೇ ವೇಳೆ, ಜಲವಿದ್ಯುತ್ ಯೋಜನಾ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಭಾರತ, ಚೀನಾ ಮತ್ತು ದಕ್ಷಿಣ ಕೊರಿಯಾದ ತಜ್ಞರ ತಂಡಗಳನ್ನು ಸಜ್ಜುಗೊಳಿಸಲಾಗುತ್ತಿದೆ.


