ತೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಜೊತೆ ರಹಸ್ಯ ಮಾರ್ಗದ ಮೂಲಕ ಮಾತುಕತೆ ನಡೆಯುತ್ತಿದೆ ಎಂಬ ಹೇಳಿಕೆಯನ್ನು IRGC ತಳ್ಳಿಹಾಕಿದೆ.
IRGC ವಕ್ತಾರ ಹೊಸಸೇನ್ ಮೊಹೆಬ್ಬಿ, ಟ್ರಂಪ್ ಹೇಳಿಕೆಯನ್ನು “ಭ್ರಮೆ” ಎಂದು ಬಣ್ಣಿಸಿದ್ದು, IRGC ಅಧಿಕಾರಿಗಳು ಮತ್ತು ಅಮೆರಿಕದ ನಡುವೆ ಯಾವುದೇ ಮಾತುಕತೆ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಮೆರಿಕ ತನ್ನ ಭರವಸೆಗಳನ್ನು ಉಲ್ಲಂಘಿಸಿದೆ ಎಂಬ ಕಾರಣಕ್ಕೆ ಇರಾನ್‌ನ ರಾಜತಾಂತ್ರಿಕ ವ್ಯವಸ್ಥೆಯೂ ಸದ್ಯ ವಾಷಿಂಗ್ಟನ್ ಜೊತೆ ಯಾವುದೇ ಮಾತುಕತೆಯಲ್ಲಿ ತೊಡಗಿಲ್ಲ ಎಂದು ಅವರು ಹೇಳಿದ್ದಾರೆ.
ಇರಾನ್ ವಿದೇಶಾಂಗ ಸಚಿವಾಲಯದಿಂದಲೂ ನಿರಾಕರಣೆ
ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯೀಲ್ ಬಘಾಯೀ ಕೂಡ ಅಮೆರಿಕ ಮತ್ತು IRGC ನಡುವೆ ಅನಧಿಕೃತ ಸಂಪರ್ಕಗಳಿವೆ ಎಂಬ ವರದಿಗಳನ್ನು ನಿರಾಕರಿಸಿದ್ದಾರೆ.
ಇರಾಕ್‌ನ ಕುರ್ದಿಸ್ತಾನ್ ಪ್ರದೇಶದ ಅಧಿಕಾರಿಗಳ ಮೂಲಕ ಎರಡೂ ರಾಷ್ಟ್ರಗಳ ನಡುವೆ ಸಂಪರ್ಕ ನಡೆದಿದೆ ಎಂಬ ವರದಿಗಳನ್ನೂ ಅವರು ತಳ್ಳಿಹಾಕಿದ್ದಾರೆ. ಅಲ್ಲದೆ, ಎರ್ಬಿಲ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ರಹಸ್ಯ ಸಭೆ ನಡೆದಿತ್ತು ಎಂಬ ಆರೋಪದಲ್ಲಿಯೂ ಯಾವುದೇ ಸತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಂತಹ ವರದಿಗಳು ಇರಾನ್‌ನ ನಿರ್ಧಾರ ಕೈಗೊಳ್ಳುವ ಸಂಸ್ಥೆಗಳ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸುವ ಉದ್ದೇಶದ ಮಾಧ್ಯಮ ತಂತ್ರಗಳು ಮತ್ತು ಮಾನಸಿಕ ಕಾರ್ಯಾಚರಣೆಗಳ ಭಾಗ ಎಂದು ಬಘಾಯೀ ಆರೋಪಿಸಿದ್ದಾರೆ.
ಇರಾನ್ ಮೇಲೆ ಒತ್ತಡ ಮುಂದುವರಿಸಿದ ಟ್ರಂಪ್
ಇರಾನ್ ಮತ್ತು ಅಮೆರಿಕ ನಡುವಿನ 60 ದಿನಗಳ ಕದನ ವಿರಾಮದ ತಿಳಿವಳಿಕೆ ನಿನ್ನೆ ರಾತ್ರಿ ಮುಕ್ತಾಯಗೊಂಡಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಇರಾನ್ “ಶರಣಾಗತಿಯ ಬಿಳಿ ಧ್ವಜ” ಹಾರಿಸಬೇಕು ಎಂದು ಟ್ರಂಪ್ ಒತ್ತಾಯಿಸಿದ್ದಾರೆ. ಆದರೆ, ಟೆಹ್ರಾನ್‌ಗೆ ಯಾವುದೇ ಗಡುವು ವಿಧಿಸುವ ಆತುರ ಅಮೆರಿಕಕ್ಕಿಲ್ಲ ಎಂದು ಅವರು ಸೂಚಿಸಿದ್ದಾರೆ.
ಇರಾನ್ ಮೇಲೆ ಅಮೆರಿಕದ ನೌಕಾ ಒತ್ತಡ ಮುಂದುವರಿಯಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಇದೇ ವೇಳೆ, ಆಯಕಟ್ಟಿನ ಮಹತ್ವ ಹೊಂದಿರುವ ಹೋರ್ಮುಜ್ ಜಲಸಂಧಿಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇರಾನ್ ಜೊತೆ ಸಮಾನಾಂತರ ಮಾತುಕತೆ ನಡೆಸುತ್ತಿರುವ ಒಮಾನ್‌ಗೂ ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ.


