ಜಾಗತಿಕ ದಕ್ಷಿಣ ರಾಷ್ಟ್ರಗಳ ಅಭಿವೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವ ಉದ್ದೇಶದಿಂದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR) ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆ (RIS) ಅಡಿಯಲ್ಲಿ ಕಾರ್ಯನಿರ್ವಹಿಸುವ DAKSHIN–ಗ್ಲೋಬಲ್ ಸೌತ್ ಸೆಂಟರ್ ಆಫ್ ಎಕ್ಸಲೆನ್ಸ್ ಸಂಸ್ಥೆಗಳು ಕೈಜೋಡಿಸಿವೆ.
ಈ ಸಂಬಂಧ ಎರಡೂ ಸಂಸ್ಥೆಗಳು ‘ಲೆಟರ್ ಆಫ್ ಅಸೋಸಿಯೇಷನ್’ (ಸಹಯೋಗ ಪತ್ರ)ಕ್ಕೆ ನಿನ್ನೆ ಸಹಿ ಹಾಕಿವೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ. ಜಾಗತಿಕ ದಕ್ಷಿಣ ರಾಷ್ಟ್ರಗಳ ಅಭಿವೃದ್ಧಿಗೆ ಅಗತ್ಯವಾದ ಸಾಮರ್ಥ್ಯ ವೃದ್ಧಿ, ಸಂಶೋಧನಾ ಸಹಯೋಗ ಮತ್ತು ತಂತ್ರಜ್ಞಾನ ಪಾಲುದಾರಿಕೆಯನ್ನು ಉತ್ತೇಜಿಸುವುದು ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ CSIRನ ಅಂತಾರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ವ್ಯವಹಾರಗಳ ನಿರ್ದೇಶನಾಲಯದ ಮುಖ್ಯಸ್ಥೆ ಡಾ. ರಾಮಸ್ವಾಮಿ ಬನ್ಸಾಲ್, ಜಾಗತಿಕ ದಕ್ಷಿಣ ರಾಷ್ಟ್ರಗಳ ನಡುವಿನ ಅಂತಾರಾಷ್ಟ್ರೀಯ ಸಹಭಾಗಿತ್ವದ ಮಹತ್ವವನ್ನು ಒತ್ತಿಹೇಳಿದರು. ಸಾಮಾನ್ಯ ಅಭಿವೃದ್ಧಿ ಆದ್ಯತೆಗಳಿಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಲು ನವೀನ ಸಹಯೋಗ ಮಾದರಿಗಳನ್ನು ರೂಪಿಸುವ ಅಗಾಧ ಅವಕಾಶಗಳಿವೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಹಯೋಗವು ದಕ್ಷಿಣ–ದಕ್ಷಿಣ ರಾಷ್ಟ್ರಗಳ ನಡುವಿನ ಸಹಕಾರವನ್ನು ಬಲಪಡಿಸಲು, ಅಂತಾರಾಷ್ಟ್ರೀಯ ಪಾಲುದಾರಿಕೆಗಳಿಗೆ ವೇಗ ನೀಡಲು ಹಾಗೂ ಸೂಕ್ತ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಹಾರಗಳ ವರ್ಗಾವಣೆ, ಅಳವಡಿಕೆ ಮತ್ತು ಅನುಷ್ಠಾನಕ್ಕೆ ಪರಿಣಾಮಕಾರಿ ವೇದಿಕೆಯಾಗಲಿದೆ ಎಂದು ಸಚಿವಾಲಯ ವಿಶ್ವಾಸ ವ್ಯಕ್ತಪಡಿಸಿದೆ.


