ಜಾಗತಿಕ ಸಂಘರ್ಷಗಳಿಗೆ ಯುದ್ಧವಲ್ಲ, ರಾಜತಾಂತ್ರಿಕತೆಯೇ ಪರಿಹಾರ: ಜೈಶಂಕರ್ ಪ್ರತಿಪಾದನೆ

2 Min Read
2 Min Read

ಜಾಗತಿಕ ಸಂಘರ್ಷಗಳಿಗೆ ಸೇನಾ ಕ್ರಮಗಳು ಶಾಶ್ವತ ಪರಿಹಾರ ನೀಡಲಾರವು. ಬದಲಾಗಿ, ವಿವಾದಗಳನ್ನು ಬಗೆಹರಿಸಲು ರಾಜತಾಂತ್ರಿಕ ಮಾತುಕತೆಗಳಿಗೆ ಆದ್ಯತೆ ನೀಡಬೇಕು ಎಂದು ಭಾರತ ಪ್ರತಿಪಾದಿಸಿದೆ.

ಅಮೆರಿಕದ ಅಟ್ಲಾಂಟಾದಲ್ಲಿ ನಡೆದ ಜಿ20 ವಿದೇಶಾಂಗ ಸಚಿವರ ಸಭೆಯ ಮೊದಲ ಪೂರ್ಣಾಧಿವೇಶನದಲ್ಲಿ ಮಾತನಾಡಿದ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್, ಜಾಗತಿಕ ಸವಾಲುಗಳನ್ನು ಎದುರಿಸಲು ರಾಜತಾಂತ್ರಿಕ ಪ್ರಯತ್ನಗಳಿಗೆ ಅವಕಾಶ ನೀಡುವುದು ಅತ್ಯಗತ್ಯ ಎಂದು ಒತ್ತಿಹೇಳಿದರು.

ಅಂತರರಾಷ್ಟ್ರೀಯ ಕಾನೂನು ಹಾಗೂ ವಿಶ್ವಸಂಸ್ಥೆಯ ಸಮುದ್ರ ಕಾನೂನು ಒಪ್ಪಂದದ (UNCLOS) ನಿಯಮಗಳಿಗೆ ಅನುಗುಣವಾಗಿ ಸಮುದ್ರ ಸಂಚಾರದ ಸ್ವಾತಂತ್ರ್ಯವನ್ನು ಕಾಪಾಡಬೇಕು. ನಾಗರಿಕ ಹಡಗುಗಳು ಮತ್ತು ನಾವಿಕರ ಮೇಲಿನ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು. ರಷ್ಯಾ–ಉಕ್ರೇನ್ ಯುದ್ಧ ಹಾಗೂ ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಜೈಶಂಕರ್ ಅವರ ಈ ಹೇಳಿಕೆ ಮಹತ್ವ ಪಡೆದಿದೆ.

ನಾಗರಿಕ ಹಡಗುಗಳು ಮತ್ತು ನಾವಿಕರ ಮೇಲಿನ ದಾಳಿಗಳ ಪರಿಣಾಮವನ್ನು ಜಾಗತಿಕ ದಕ್ಷಿಣದ (Global South) ರಾಷ್ಟ್ರಗಳು ಹೆಚ್ಚು ಎದುರಿಸುತ್ತಿವೆ ಎಂದು ಜೈಶಂಕರ್ ಗಮನಸೆಳೆದರು. ಇಂತಹ ದಾಳಿಗಳಿಂದ ಇಂಧನ, ಆಹಾರ ಮತ್ತು ರಸಗೊಬ್ಬರ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಗೆ ಅಡ್ಡಿಯಾಗುತ್ತಿದ್ದು, ಅವುಗಳ ಬೆಲೆಯೂ ಏರಿಕೆಯಾಗುತ್ತಿದೆ ಎಂದು ಅವರು ತಿಳಿಸಿದರು.

ಈ ವರ್ಷದ ಫೆಬ್ರವರಿಯಲ್ಲಿ ಸಂಘರ್ಷ ಆರಂಭವಾದ ಬಳಿಕ ಪಶ್ಚಿಮ ಏಷ್ಯಾದಲ್ಲಿ 14 ಮಂದಿ ನಾವಿಕರು ಸೇರಿದಂತೆ ಕನಿಷ್ಠ 22 ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಗುರುವಾರ ಅಟ್ಲಾಂಟಾಗೆ ಆಗಮಿಸಿದ್ದ ಜೈಶಂಕರ್, ಸಭೆಗೂ ಮುನ್ನ ವಿವಿಧ ದೇಶಗಳ ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಿದರು. ಜಿ20 ಸಭೆಯ ಭಾಗವಾಗಿ ನಡೆಯಲಿರುವ ಕ್ವಾಡ್ (QUAD) ವಿದೇಶಾಂಗ ಸಚಿವರ ಸಭೆಯಲ್ಲೂ ಅವರು ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ಜಪಾನ್, ಆಸ್ಟ್ರೇಲಿಯಾ ಮತ್ತು ಅಮೆರಿಕದ ವಿದೇಶಾಂಗ ಸಚಿವರು ಭಾಗವಹಿಸಲಿದ್ದಾರೆ.

ಇದೇ ವೇಳೆ, ಡಿಸೆಂಬರ್ 14 ಮತ್ತು 15ರಂದು ಮಿಯಾಮಿಯಲ್ಲಿ ಜಿ20 ನಾಯಕರ ಶೃಂಗಸಭೆ ಆಯೋಜಿಸಲು ಅಮೆರಿಕ ಸಿದ್ಧತೆ ನಡೆಸಿದೆ.

ಅಟ್ಲಾಂಟಾದ ಕಾರ್ಯಕ್ರಮಗಳು ಮುಗಿದ ಬಳಿಕ ಜೈಶಂಕರ್ ಅವರು ಆಂಟಿಗುವಾ ಮತ್ತು ಬಾರ್ಬುಡಾದ ಸೇಂಟ್ ಜಾನ್ಸ್‌ಗೆ ಪ್ರಯಾಣಿಸಲಿದ್ದು, ನವೆಂಬರ್ 1ರಿಂದ 4ರವರೆಗೆ ನಡೆಯಲಿರುವ ಕಾಮನ್‌ವೆಲ್ತ್ ರಾಷ್ಟ್ರಗಳ ಸರ್ಕಾರದ ಮುಖ್ಯಸ್ಥರ ಸಭೆಯಲ್ಲಿ (CHOGM) ಭಾರತದ ನಿಯೋಗವನ್ನು ಮುನ್ನಡೆಸಲಿದ್ದಾರೆ.

Share This Article