ಇಸ್ರೋದಿಂದ ಮತ್ತೊಂದು ಐತಿಹಾಸಿಕ ಸಾಧನೆ: ನ್ಯಾವಿಗೇಷನ್ ಉಪಗ್ರಹ NVS-03 ಯಶಸ್ವಿ ಉಡಾವಣೆ

3 Min Read
3 Min Read

ಭಾರತದ ಸ್ವದೇಶಿ ಉಪಗ್ರಹ ನ್ಯಾವಿಗೇಷನ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವದ ಸಾಧನೆ ಮಾಡಿದೆ. ಸಂಸ್ಥೆಯ ಮುಂದಿನ ತಲೆಮಾರಿನ ನ್ಯಾವಿಗೇಷನ್ ಉಪಗ್ರಹವಾದ NVS-03 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ದೇಶದ ಸ್ವತಂತ್ರ ಉಪಗ್ರಹ ಆಧಾರಿತ ನ್ಯಾವಿಗೇಷನ್ ಸಾಮರ್ಥ್ಯ ವೃದ್ಧಿಗೆ ಹೊಸ ಹೆಜ್ಜೆ ಇಟ್ಟಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ವೇದಿಕೆಯಿಂದ ಜಿಎಸ್‌ಎಲ್‌ವಿ-F18 ರಾಕೆಟ್ ಮೂಲಕ ಈ ಉಪಗ್ರಹವನ್ನು ಕಳೆದ ರಾತ್ರಿ ಉಡಾವಣೆ ಮಾಡಲಾಯಿತು. ಇದು ಜಿಎಸ್‌ಎಲ್‌ವಿ ಸರಣಿಯ 20ನೇ ಹಾರಾಟವಾಗಿದೆ. ಉಡಾವಣೆಯ ಬಳಿಕ ಉಪಗ್ರಹವು ರಾಕೆಟ್‌ನಿಂದ ಯಶಸ್ವಿಯಾಗಿ ಬೇರ್ಪಟ್ಟು ನಿಗದಿತ ಭೂಸ್ಥಿರ ವರ್ಗಾವಣೆ ಕಕ್ಷೆ (Geosynchronous Transfer Orbit) ಸೇರಿದೆ.

NVS-03 ಉಪಗ್ರಹವು ಇಸ್ರೋದ ಎರಡನೇ ತಲೆಮಾರಿನ ನ್ಯಾವಿಗೇಷನ್ ಉಪಗ್ರಹ ಸರಣಿಯ ಮೂರನೇ ಉಪಗ್ರಹವಾಗಿದೆ. ಭಾರತದ ಸ್ವದೇಶಿ ನ್ಯಾವಿಗೇಷನ್ ವ್ಯವಸ್ಥೆಯಾದ ‘ನ್ಯಾವಿಕ್’ (NavIC – Navigation with Indian Constellation) ಸೇವೆಗಳ ನಿರಂತರತೆ ಕಾಪಾಡುವುದು ಹಾಗೂ ಅವುಗಳ ಲಭ್ಯತೆಯನ್ನು ಹೆಚ್ಚಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಜಾಗತಿಕ ಮಟ್ಟದಲ್ಲಿ ಬಳಕೆಯಲ್ಲಿರುವ ಜಿಪಿಎಸ್‌ಗೆ (GPS) ಭಾರತದದೇ ಆದ ಪರ್ಯಾಯ ವ್ಯವಸ್ಥೆಯಾಗಿ NavIC ಕಾರ್ಯನಿರ್ವಹಿಸುತ್ತಿದೆ.

ಈ ಉಪಗ್ರಹದಲ್ಲಿ ಸ್ವದೇಶಿಯಾಗಿ ಅಭಿವೃದ್ಧಿಪಡಿಸಿದ ಪರಮಾಣು ಗಡಿಯಾರದ ಜೊತೆಗೆ ಖರೀದಿಸಿದ ಇತರ ಪರಮಾಣು ಗಡಿಯಾರಗಳನ್ನೂ ಅಳವಡಿಸಲಾಗಿದೆ. ಈಗಾಗಲೇ ಬಳಕೆಯಲ್ಲಿರುವ L5 ಮತ್ತು S ಆವರ್ತನ ಬ್ಯಾಂಡ್‌ಗಳ ಜತೆಗೆ ಹೊಸದಾಗಿ L1 ಆವರ್ತನ ಬ್ಯಾಂಡ್‌ನ್ನೂ ಪರಿಚಯಿಸಲಾಗಿದೆ. ಇದರಿಂದ ಭಾರತದ ಪ್ರಾದೇಶಿಕ ನ್ಯಾವಿಗೇಷನ್ ವ್ಯವಸ್ಥೆಯ ಕಾರ್ಯಕ್ಷಮತೆ ಮತ್ತಷ್ಟು ಸುಧಾರಿಸಲಿದೆ.

ನಿಖರ ಸ್ಥಳನಿರ್ಧಾರ, ನ್ಯಾವಿಗೇಷನ್ ಮತ್ತು ಸಮಯ ನಿರ್ವಹಣಾ ಸೇವೆಗಳಲ್ಲಿ ಭಾರತ ಸ್ವಾವಲಂಬನೆ ಸಾಧಿಸಲು ಈ ಯೋಜನೆ ಮಹತ್ವದ್ದಾಗಿದೆ. ನಾಗರಿಕ ಬಳಕೆ ಮಾತ್ರವಲ್ಲದೆ, ಕಾರ್ಯತಂತ್ರ ಹಾಗೂ ಭದ್ರತಾ ಕ್ಷೇತ್ರಗಳಿಗೂ ಈ ತಂತ್ರಜ್ಞಾನ ನೆರವಾಗಲಿದೆ.

ಉಡಾವಣೆಯ ಯಶಸ್ಸಿನ ಬಳಿಕ ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರು ಈ ಯೋಜನೆಯಲ್ಲಿ ಪಾಲ್ಗೊಂಡ ವಿಜ್ಞಾನಿಗಳು, ಎಂಜಿನಿಯರ್‌ಗಳು, ಕೈಗಾರಿಕಾ ಪಾಲುದಾರರು ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ಅಭಿನಂದಿಸಿದರು. ಸುಮಾರು 2,232 ಕೆ.ಜಿ. ತೂಕದ ಉಪಗ್ರಹವನ್ನು ನಿಗದಿತ ವರ್ಗಾವಣೆ ಕಕ್ಷೆಗೆ ನಿಖರವಾಗಿ ಸೇರಿಸಲಾಗಿದೆ ಎಂದು ಅವರು ತಿಳಿಸಿದರು.

ಎರಡು ಸತತ ಜಿಎಸ್‌ಎಲ್‌ವಿ ಉಡಾವಣೆಗಳ ನಡುವಿನ ಸಿದ್ಧತಾ ಅವಧಿಯನ್ನು ಕೇವಲ 56 ದಿನಗಳಿಗೆ ಇಳಿಸಿರುವುದೂ ಈ ಕಾರ್ಯಾಚರಣೆಯ ಮತ್ತೊಂದು ವಿಶೇಷವಾಗಿದೆ. ಜಿಎಸ್‌ಎಲ್‌ವಿ ಮಿಷನ್‌ಗಳ ನಡುವೆ ಸಾಧಿಸಲಾದ ಅತ್ಯಂತ ಕಡಿಮೆ ಅವಧಿ ಇದಾಗಿದೆ ಎಂದು ಇಸ್ರೋ ಅಧ್ಯಕ್ಷರು ವಿವರಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ನಾರಾಯಣನ್, NVS-03 ಉಪಗ್ರಹದ ಮೂಲಕ ಭಾರತದ ಮೂರನೇ ಸ್ವದೇಶಿ ಪರಮಾಣು ಗಡಿಯಾರವನ್ನು ಕಕ್ಷೆಗೆ ಸೇರಿಸಲಾಗಿದೆ ಎಂದು ಹೇಳಿದರು. ಈಗಾಗಲೇ ಎರಡು ಸ್ವದೇಶಿ ಪರಮಾಣು ಗಡಿಯಾರಗಳು ಬಾಹ್ಯಾಕಾಶದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದೂ ಅವರು ಮಾಹಿತಿ ನೀಡಿದರು.

ಭಾರತದ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆಯ ಭಾಗವಾಗಿ ಈ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ. ದೇಶದಾದ್ಯಂತ ಹಾಗೂ ಗಡಿಗಳಿಂದ ಸುಮಾರು 1,500 ಕಿಲೋಮೀಟರ್‌ಗಳವರೆಗಿನ ಪ್ರದೇಶದಲ್ಲಿ ನ್ಯಾವಿಗೇಷನ್ ಸೇವೆ ಒದಗಿಸುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

ಈ ಯೋಜನೆಯಡಿ ಒಟ್ಟು ಏಳು ಉಪಗ್ರಹಗಳ ಸಮೂಹವನ್ನು ಕಕ್ಷೆಯಲ್ಲಿ ಸ್ಥಾಪಿಸುವ ಗುರಿ ಹೊಂದಲಾಗಿದೆ. NVS-03 ಈ ಕಾರ್ಯಕ್ರಮದಡಿ ಉಡಾವಣೆಗೊಂಡ ನಾಲ್ಕನೇ ಉಪಗ್ರಹವಾಗಿದೆ ಎಂದು ಇಸ್ರೋ ಅಧ್ಯಕ್ಷರು ವಿವರಿಸಿದರು. ನಾಲ್ಕು ಉಪಗ್ರಹಗಳು ಕಕ್ಷೆಯಲ್ಲಿ ಕಾರ್ಯನಿರ್ವಹಿಸುವ ಹಂತ ತಲುಪಿದ ಬಳಿಕ ಅವುಗಳ ಸಂಕೇತಗಳನ್ನು ವಿವಿಧ ಉದ್ದೇಶಗಳಿಗೆ ಬಳಸಿಕೊಳ್ಳಲು ಸಾಧ್ಯವಾಗಲಿದೆ.

ಆದರೆ, ಮೊಬೈಲ್ ವ್ಯವಸ್ಥೆಗಳಲ್ಲಿಯೂ ಈ ನ್ಯಾವಿಗೇಷನ್ ಸೇವೆಗಳನ್ನು ವ್ಯಾಪಕವಾಗಿ ಬಳಸಲು ಉಪಗ್ರಹ ಸಮೂಹದ ಸ್ಥಾಪನೆ ಪೂರ್ಣಗೊಳ್ಳಬೇಕಿದೆ. ಏಳು ಉಪಗ್ರಹಗಳ ವ್ಯವಸ್ಥೆ ಪೂರ್ಣಗೊಂಡ ಬಳಿಕ ಸಾರ್ವಜನಿಕ ಬಳಕೆಗೆ ಸೇವೆಗಳನ್ನು ಇನ್ನಷ್ಟು ವಿಸ್ತರಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

Share This Article