ನವದೆಹಲಿ: 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ‘ವಿಕಸಿತ ಭಾರತ’ ಗುರಿಗೆ ಅನುಗುಣವಾಗಿ ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆಗಳನ್ನು ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯ ಸಮಗ್ರ ಪರಿಶೀಲನೆ ನಡೆಸಿ, ಅಗತ್ಯ ಬದಲಾವಣೆಗಳನ್ನು ಶಿಫಾರಸು ಮಾಡಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.
‘ವಿಕಸಿತ ಭಾರತಕ್ಕಾಗಿ ಬ್ಯಾಂಕಿಂಗ್ ಕುರಿತ ಉನ್ನತ ಮಟ್ಟದ ಸಮಿತಿ’ಯು ದೇಶದ ಬ್ಯಾಂಕಿಂಗ್ ವಲಯವನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸುವುದು, ಆರ್ಥಿಕ ಸೇವೆಗಳನ್ನು ಎಲ್ಲ ವರ್ಗದ ಜನರಿಗೆ ತಲುಪಿಸುವುದು ಹಾಗೂ ವ್ಯವಸ್ಥೆಯನ್ನು ಆರ್ಥಿಕವಾಗಿ ಸದೃಢಗೊಳಿಸುವ ಉದ್ದೇಶ ಹೊಂದಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಮಾಜಿ ಕೇಂದ್ರ ಜಾಗೃತ ಆಯುಕ್ತ ಸುರೇಶ್ ಎನ್. ಪಟೇಲ್ ಅವರು ಸಮಿತಿಯ ಅಧ್ಯಕ್ಷರಾಗಿರಲಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ನ ಉಪ ಗವರ್ನರ್ ಶಿರೀಶ್ ಚಂದ್ರ ಮುರ್ಮು, ಇಂಡಿಯನ್ ಬ್ಯಾಂಕ್ನ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಜಾ ಚುಂಡೂರು ಮತ್ತು ಆರ್ಬಿಐನ ಮಾಜಿ ಉಪ ಗವರ್ನರ್ ಎನ್. ಎಸ್. ವಿಶ್ವನಾಥನ್ ಸದಸ್ಯರಾಗಿರುತ್ತಾರೆ. ಹಣಕಾಸು ಸೇವೆಗಳ ಇಲಾಖೆಯ ಬ್ಯಾಂಕಿಂಗ್ ವಿಭಾಗದ ಜಂಟಿ ಕಾರ್ಯದರ್ಶಿ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಸಮಿತಿಗೆ ಆರು ತಿಂಗಳ ಕಾಲಾವಕಾಶ ನೀಡಲಾಗಿದೆ. ಈ ವರ್ಷದ ಕೇಂದ್ರ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂತಹ ಸಮಿತಿ ರಚಿಸುವುದಾಗಿ ಘೋಷಿಸಿದ್ದರು.
ದೇಶದ ಬ್ಯಾಂಕುಗಳಲ್ಲಿ ಪ್ರಸ್ತುತ ಅನುಸರಿಸಲಾಗುತ್ತಿರುವ ಕಾರ್ಯವಿಧಾನಗಳು ಮತ್ತು ಸುರಕ್ಷತಾ ಮಾನದಂಡಗಳನ್ನು ಸಮಿತಿ ಪರಿಶೀಲಿಸಲಿದೆ. ಜಾಗತಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಉತ್ತಮ ಪದ್ಧತಿಗಳನ್ನು ಅಧ್ಯಯನ ಮಾಡಿ, ಅವುಗಳನ್ನು ಭಾರತೀಯ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳುವ ಸಾಧ್ಯತೆಗಳನ್ನೂ ಪರಿಶೀಲಿಸಲಿದೆ.
ಇದರ ಜತೆಗೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (RRBs) ಮತ್ತು ಸಹಕಾರಿ ಬ್ಯಾಂಕುಗಳು ಸೇರಿದಂತೆ ವಿವಿಧ ಬ್ಯಾಂಕಿಂಗ್ ಸಂಸ್ಥೆಗಳಿಗೆ ಅನ್ವಯಿಸುವ ನಿಯಂತ್ರಣ ಹಾಗೂ ಕಾನೂನು ಚೌಕಟ್ಟನ್ನು ಸಮಿತಿ ಮೌಲ್ಯಮಾಪನ ಮಾಡಲಿದೆ. ಬ್ಯಾಂಕಿಂಗ್ ಸೇವೆಗಳ ಕಾರ್ಯಕ್ಷಮತೆ ಹೆಚ್ಚಿಸುವುದು, ಪ್ರಕ್ರಿಯೆಗಳನ್ನು ಸರಳಗೊಳಿಸುವುದು ಮತ್ತು ಗ್ರಾಹಕರಿಗೆ ಸುಲಭವಾಗಿ ಸೇವೆ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಸುಧಾರಣೆಗಳನ್ನು ಶಿಫಾರಸು ಮಾಡಲಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ತಂತ್ರಜ್ಞಾನಗಳ ಬಳಕೆಯನ್ನು ಹೆಚ್ಚಿಸಲು ಕಾರ್ಯಯೋಜನೆಯನ್ನೂ ರೂಪಿಸಲಿದೆ. ಇದೇ ವೇಳೆ, ತಂತ್ರಜ್ಞಾನ ಬಳಕೆಯಿಂದ ಎದುರಾಗಬಹುದಾದ ಸೈಬರ್ ಭದ್ರತಾ ಅಪಾಯಗಳನ್ನು ತಡೆಯಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಶಿಫಾರಸು ಮಾಡುವುದು ಸಮಿತಿಯ ಪ್ರಮುಖ ಹೊಣೆಗಾರಿಕೆಗಳಲ್ಲಿ ಒಂದಾಗಿದೆ.


