ಸರ್ದಾರ್ ಪಟೇಲ್ ಜನ್ಮದಿನದಂದು ಏಕತಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಿರುವ ಮೋದಿ

1 Min Read
1 Min Read

ಏಕತಾ ನಗರ: ರಾಷ್ಟ್ರೀಯ ಏಕತಾ ದಿನಾಚರಣೆಯ ಅಂಗವಾಗಿ ಗುಜರಾತ್‌ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ನರ್ಮದಾ ಜಿಲ್ಲೆಯ ಏಕತಾ ನಗರದಲ್ಲಿ ₹400 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಇಂದು ಚಾಲನೆ ನೀಡಲಿದ್ದಾರೆ.

ಯೋಜನೆಗಳ ಶಂಕುಸ್ಥಾಪನೆ ನೆರವೇರಿಸುವುದರ ಜತೆಗೆ, ಪೂರ್ಣಗೊಂಡ ಕಾಮಗಾರಿಗಳನ್ನು ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಒಳಚರಂಡಿ ಮತ್ತು ನೀರು ಸಂಸ್ಕರಣಾ ಘಟಕ, ಕಟ್ಟಡಗಳ ಮುಂಭಾಗಕ್ಕೆ ಅಲಂಕಾರಿಕ ಬೆಳಕಿನ ವ್ಯವಸ್ಥೆ, ನರ್ಮದಾ ಘಾಟ್‌ನ ಉನ್ನತೀಕರಣ ಹಾಗೂ ರೈನ್‌ಫಾರೆಸ್ಟ್ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳು ಈ ಪಟ್ಟಿಯಲ್ಲಿವೆ.

ಗುಜರಾತ್ ಪ್ರವಾಸದ ಎರಡನೇ ಹಾಗೂ ಕೊನೆಯ ದಿನವಾದ ಇಂದು, ಪ್ರಧಾನಿ ಮೋದಿ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 151ನೇ ಜನ್ಮ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಏಕತಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಿದ್ದಾರೆ. ಬಳಿಕ ಸಂಜೆ ನಡೆಯಲಿರುವ ರಾಷ್ಟ್ರೀಯ ಏಕತಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದಕ್ಕೂ ಮುನ್ನ ನಿನ್ನೆ ಏಕತಾ ನಗರದಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆಯ ಭಾಗವಾಗಿ ಆಯೋಜಿಸಿರುವ ‘ಭಾರತ್ ಪರ್ವ್ 2026’ ಉತ್ಸವವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಈ ಉತ್ಸವ ನವೆಂಬರ್ 15ರವರೆಗೆ ನಡೆಯಲಿದೆ.

‘ಏಕ ಭಾರತ, ಶ್ರೇಷ್ಠ ಭಾರತ’ ಎಂಬ ಆಶಯದಡಿ ಆಯೋಜಿಸಿರುವ ಈ ಉತ್ಸವವು ದೇಶದ ವೈವಿಧ್ಯಮಯ ಸಂಸ್ಕೃತಿ, ಸಂಪ್ರದಾಯ, ಆಹಾರ ಪದ್ಧತಿ, ಕರಕುಶಲ ಕಲೆ ಮತ್ತು ಪರಂಪರೆಯನ್ನು ಪರಿಚಯಿಸುವ ವೇದಿಕೆಯಾಗಿದೆ. ದೇಶದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಒಂದೇ ವೇದಿಕೆಯಲ್ಲಿ ಪ್ರದರ್ಶಿಸುವುದು ಇದರ ಉದ್ದೇಶವಾಗಿದೆ.

Share This Article