ಡಿಜಿಟಲ್ ಸಂಪರ್ಕ ವಿಸ್ತರಣೆಯಿಂದ ಭಾರತ ಡಿಜಿಟಲ್ ರಾಷ್ಟ್ರವಾಗಿ ರೂಪಾಂತರ: ಅಮಿತ್ ಶಾ
ಡಿಜಿಟಲ್ ಸಂಪರ್ಕ ವಿಸ್ತರಣೆ, ಡಿಜಿಟಲ್ ಆಡಳಿತ ವ್ಯವಸ್ಥೆ ಬಲಪಡಿಸುವುದು ಹಾಗೂ ಸಾರ್ವಜನಿಕ ಸೇವೆಗಳನ್ನು ಸುಲಭವಾಗಿ ಜನರಿಗೆ ತಲುಪಿಸುವ ಮೂಲಕ ಭಾರತವನ್ನು ಡಿಜಿಟಲ್ ರಾಷ್ಟ್ರವಾಗಿ ರೂಪಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಡಿಜಿಟಲ್ ಇಂಡಿಯಾ ಯೋಜನೆಗೆ 11 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಕಳೆದ ಒಂದು ದಶಕದಲ್ಲಿ ದೇಶವು ಇಂಟರ್‌ನೆಟ್ ಸಂಪರ್ಕ, ಡಿಜಿಟಲ್ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಆಧಾರಿತ ಆಡಳಿತದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ದೇಶದಲ್ಲಿ 103 ಕೋಟಿಗೂ ಅಧಿಕ ಜನರು ಇಂಟರ್‌ನೆಟ್ ಸಂಪರ್ಕ ಹೊಂದಿದ್ದು, ಭಾರತ್‌ನೆಟ್ ಯೋಜನೆಯಡಿ 2.20 ಲಕ್ಷಕ್ಕೂ ಹೆಚ್ಚು ಗ್ರಾಮಗಳು ಡಿಜಿಟಲ್ ಜಾಲಕ್ಕೆ ಸಂಪರ್ಕಗೊಂಡಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದೇ ವೇಳೆ, ನೇರ ಲಾಭ ವರ್ಗಾವಣೆ (DBT) ಯೋಜನೆಯ ಮೂಲಕ ಫಲಾನುಭವಿಗಳಿಗೆ ಇದುವರೆಗೆ ₹51 ಲಕ್ಷ ಕೋಟಿಗೂ ಅಧಿಕ ಮೊತ್ತ ನೇರವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಜೊತೆಗೆ, ಜಗತ್ತಿನ ಒಟ್ಟು ಡಿಜಿಟಲ್ ವಹಿವಾಟುಗಳಲ್ಲಿ ಸುಮಾರು ಅರ್ಧದಷ್ಟು ವ್ಯವಹಾರಗಳು ಭಾರತದಲ್ಲೇ ನಡೆಯುತ್ತಿವೆ ಎಂದು ಅವರು ಉಲ್ಲೇಖಿಸಿದ್ದಾರೆ.
ಡಿಜಿಟಲೀಕರಣವು ದೇಶದ ಅಭಿವೃದ್ಧಿ ಪಯಣದ ಅವಿಭಾಜ್ಯ ಅಂಗವಾಗಿ ಪರಿಣಮಿಸಿದ್ದು, ನವೋದ್ಯಮ, ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡುವುದರ ಜೊತೆಗೆ ಕೃತಕ ಬುದ್ಧಿಮತ್ತೆ (AI), ಸೆಮಿಕಂಡಕ್ಟರ್ ಹಾಗೂ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಸೇರಿದಂತೆ ಹಲವು ಉದಯೋನ್ಮುಖ ಕ್ಷೇತ್ರಗಳ ಬೆಳವಣಿಗೆಗೆ ಹೊಸ ವೇಗ ನೀಡಿದೆ ಎಂದು ಅವರು ತಿಳಿಸಿದ್ದಾರೆ.


