ಅರುಣಾಚಲ ಪ್ರವಾಹ ಹಾನಿ ಪರಿಶೀಲನೆಗೆ ಕೇಂದ್ರ ಸಚಿವರ ವೈಮಾನಿಕ ಸಮೀಕ್ಷೆ; ಸಂತ್ರಸ್ತರಿಗೆ ನೆರವಿನ ಭರವಸೆ
ಅರುಣಾಚಲ ಪ್ರದೇಶದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಗಳ ಸ್ಥಿತಿಗತಿಯನ್ನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಮುಖ್ಯಮಂತ್ರಿ ಪೆಮಾ ಖಂಡು ಅವರೊಂದಿಗೆ ಇಂದು ವೈಮಾನಿಕ ಸಮೀಕ್ಷೆ ನಡೆಸಿದರು.
ಉನ್ನತ ಮಟ್ಟದ ಪರಿಶೀಲನಾ ಪ್ರವಾಸದ ಎರಡನೇ ದಿನವಾದ ಇಂದು, ನಿಯೋಗವು ಮೊದಲಿಗೆ ಪೂರ್ವ ಸಿಯಾಂಗ್ ಜಿಲ್ಲೆಯ ಪಾಸಿಘಾಟ್ ಪ್ರದೇಶದ ಪ್ರವಾಹ ಹಾನಿಯನ್ನು ಪರಿಶೀಲಿಸಿತು. ಬಳಿಕ ಬೋಯಿಂಗ್ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿತು.
ಭಾರೀ ಪ್ರವಾಹ ಮತ್ತು ಭೂಕುಸಿತದಿಂದ ಗ್ರಾಮದಲ್ಲಿ 20ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, ಭತ್ತದ ಗದ್ದೆಗಳು, ಬೆಳೆಗಳು ಹಾಗೂ ಜಾನುವಾರುಗಳಿಗೆ ವ್ಯಾಪಕ ಹಾನಿಯಾಗಿದೆ. ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.
ಸಂತ್ರಸ್ತರೊಂದಿಗೆ ಸಂವಾದ ನಡೆಸಿದ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಸಮಗ್ರ ಆರ್ಥಿಕ ನೆರವು ಹಾಗೂ ಪುನರ್ವಸತಿ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪ್ರವಾಹದ ನೀರನ್ನು ತಡೆಗಟ್ಟಲು ತಾತ್ಕಾಲಿಕ ತಡೆಗೋಡೆ ನಿರ್ಮಿಸಿದ ಸ್ಥಳೀಯ ಸ್ವಯಂಸೇವಕರ ಕಾರ್ಯವನ್ನೂ ಅವರು ಶ್ಲಾಘಿಸಿದರು.
ಪಾಸಿಘಾಟ್ ಪಟ್ಟಣವನ್ನು ಮರುಕಳಿಸುವ ಪ್ರವಾಹದಿಂದ ರಕ್ಷಿಸಲು ಶಾಶ್ವತ ಅಣೆಕಟ್ಟು ನಿರ್ಮಾಣದ ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಚರ್ಚೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಳಿಕ ನಿಯೋಗವು ಲೋವರ್ ಸುಬನ್ಸಿರಿ ಜಿಲ್ಲೆಯ ಯಾಜಾಲಿ ಪ್ರದೇಶಕ್ಕೆ ತೆರಳಿ ಅಲ್ಲಿನ ಪ್ರವಾಹ ಪರಿಸ್ಥಿತಿಯನ್ನೂ ಪರಿಶೀಲಿಸಿತು.
ಇದುವರೆಗೆ ಅರುಣಾಚಲ ಪ್ರದೇಶದಲ್ಲಿ ಪ್ರವಾಹ ಸಂಬಂಧಿತ ಘಟನೆಗಳಲ್ಲಿ ನಾಲ್ವರು ಮೃತಪಟ್ಟಿದ್ದು, 21 ಮಂದಿ ಗಾಯಗೊಂಡಿದ್ದಾರೆ. ರಾಜ್ಯದ 28 ಜಿಲ್ಲೆಗಳಲ್ಲಿನ ಸುಮಾರು 90,499 ಜನರು ಪ್ರವಾಹದಿಂದ ತೊಂದರೆ ಅನುಭವಿಸಿದ್ದಾರೆ. ಅಪ್ಪರ್ ಸಿಯಾಂಗ್ ಜಿಲ್ಲೆಯಲ್ಲಿ 47,357 ಮಂದಿ, ಸಿಯಾಂಗ್‌ನಲ್ಲಿ 23,715, ಕ್ರಾ ದಾಡಿಯಲ್ಲಿ 8,171 ಹಾಗೂ ಈಸ್ಟ್ ಕಾಮೆಂಗ್‌ನಲ್ಲಿ 5,895 ಮಂದಿ ಪ್ರವಾಹದ ಪರಿಣಾಮಕ್ಕೆ ಒಳಗಾಗಿದ್ದಾರೆ.


