ಮುಂಬೈ: ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ: ಪಾರ್ಟ್ 1’ ಚಿತ್ರದ ಟ್ರೇಲರ್ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ಜೋರಾಗಿವೆ. ಈ ನಡುವೆ, ದೂರದರ್ಶನದ ಐತಿಹಾಸಿಕ ‘ಮಹಾಭಾರತ’ ಧಾರಾವಾಹಿಯಲ್ಲಿ ಶ್ರೀಕೃಷ್ಣ ಪಾತ್ರದ ಮೂಲಕ ಖ್ಯಾತಿ ಪಡೆದ ನಟ ನಿತೀಶ್ ಭಾರದ್ವಾಜ್, ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸುವ ಜೊತೆಗೆ ನಟ ರಣಬೀರ್ ಕಪೂರ್ ಅವರಿಗೆ ಮಹತ್ವದ ಸಲಹೆ ನೀಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ನಿತೀಶ್ ಭಾರದ್ವಾಜ್, ‘ರಾಮಾಯಣ: ಪಾರ್ಟ್ 1’ ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆಲ್ಲುವ ಸಾಮರ್ಥ್ಯ ಹೊಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಿರ್ಮಾಪಕ ನಮಿತ್ ಮಲ್ಹೋತ್ರಾ ಹಾಗೂ ನಿರ್ದೇಶಕ ನಿತೇಶ್ ತಿವಾರಿ ಅವರ ಕೆಲಸವನ್ನು ಶ್ಲಾಘಿಸಿದ ಅವರು, ಭಾರತದ ಸಿನಿಮಾ ಜಗತ್ತಿಗೆ ಸತ್ಯಜಿತ್ ರೇ ಮತ್ತು ಶೇಖರ್ ಕಪೂರ್ ನಂತರ ಮತ್ತೊಂದು ದೊಡ್ಡ ಕೊಡುಗೆಯಾಗಿ ನಿತೇಶ್ ತಿವಾರಿ ಹೊರಹೊಮ್ಮಲಿದ್ದಾರೆ ಎಂದು ಬಣ್ಣಿಸಿದರು.
ಚಿತ್ರದ ಪ್ರೊಡಕ್ಷನ್ ಡಿಸೈನ್, ಛಾಯಾಗ್ರಹಣ, VFX ಮತ್ತು AI ತಂತ್ರಜ್ಞಾನದ ಬಳಕೆ ಅದ್ಭುತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸಂಗೀತ ನಿರ್ದೇಶಕರಾದ ಹಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಅವರ ಸಹಕಾರವನ್ನೂ ಪ್ರಶಂಸಿಸಿದರು.
ಇದೇ ವೇಳೆ, ರಣಬೀರ್ ಕಪೂರ್ ಅಭಿನಯವನ್ನು ಹೊಗಳಿದ ನಿತೀಶ್ ಭಾರದ್ವಾಜ್, “ಇನ್ನು ಮುಂದೆ ನಿಮ್ಮ ಮೇಲೆ ಸಾಮಾಜಿಕ ಜವಾಬ್ದಾರಿ ಹೆಚ್ಚಾಗಿದೆ. ಭಾರತದ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಎತ್ತಿಹಿಡಿಯುವಂತಹ ಪಾತ್ರಗಳಿಗೆ ಆದ್ಯತೆ ನೀಡಿ. ‘ಅನಿಮಲ್’ ರೀತಿಯ ಸಿನಿಮಾಗಳನ್ನು ಇನ್ನು ಮುಂದೆ ಮಾಡಬೇಡಿ. ದೊಡ್ಡ ಮೊತ್ತದ ಸಂಭಾವನೆ ಸಿಕ್ಕರೂ ಅಂತಹ ಚಿತ್ರಗಳನ್ನು ಒಪ್ಪಿಕೊಳ್ಳಬೇಡಿ. ನಿಮ್ಮ ಪ್ರತಿಭೆಗೆ ಭಾರತದಲ್ಲೇ ಸಾಕಷ್ಟು ಉತ್ತಮ ಕಥೆಗಳಿವೆ” ಎಂದು ಸಲಹೆ ನೀಡಿದ್ದಾರೆ.
ಸೀತೆಯ ಪಾತ್ರದಲ್ಲಿ ನಟಿಸಿರುವ ಸಾಯಿ ಪಲ್ಲವಿ ಅವರನ್ನು ಪ್ರೇಕ್ಷಕರು ಸ್ವೀಕರಿಸುತ್ತಾರೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.
“ನಿತೇಶ್ ತಿವಾರಿ ಅವರ ಪರಿಶ್ರಮಕ್ಕೆ ಗೌರವ ಸೂಚಿಸುವ ಸಲುವಾಗಿ ನಾನು ‘ರಾಮಾಯಣ’ ಚಿತ್ರವನ್ನು ಕನಿಷ್ಠ ಐದು ಬಾರಿ ನೋಡಲು ಬಯಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಚಿತ್ರದಲ್ಲಿ ಅರುಣ್ ಗೋವಿಲ್ (ದಶರಥ), ಅಜಿಂಕ್ಯ ದೇವ್ (ವಿಶ್ವಾಮಿತ್ರ), ಕುನಾಲ್ ಕಪೂರ್ (ಇಂದ್ರ), ರಕುಲ್ ಪ್ರೀತ್ ಸಿಂಗ್ (ಶೂರ್ಪಣಖೆ), ವಿವೇಕ್ ಒಬೆರಾಯ್ (ಮೇಘನಾದ) ಹಾಗೂ ರವಿ ದುಬೆ (ಲಕ್ಷ್ಮಣ) ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಆದರೆ ಟ್ರೇಲರ್‌ನಲ್ಲಿ ಹನುಮಂತನ ಪಾತ್ರದಲ್ಲಿ ನಟಿಸಿರುವ ಸನ್ನಿ ಡಿಯೋಲ್ ಕಾಣಿಸಿಕೊಳ್ಳದಿರುವುದು ಅಭಿಮಾನಿಗಳ ಗಮನ ಸೆಳೆದಿದೆ.
ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರವನ್ನು ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, DNEG ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳು ನಿರ್ಮಿಸುತ್ತಿದ್ದು, 2026ರ ದೀಪಾವಳಿ ಸಂದರ್ಭದಲ್ಲಿ ವಿಶ್ವದಾದ್ಯಂತ ಬಿಡುಗಡೆಗೊಳ್ಳಲಿದೆ.


