ಅರ್ಜುನ್ ಜನ್ಯರಿಂದ ಅನುಷ್ಕಾಗೆ ಸಿಹಿ ಉಡುಗೊರೆ; ಪ್ಲೇಬ್ಯಾಕ್ ಸಿಂಗರ್ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ

1 Min Read
1 Min Read

ಬೆಂಗಳೂರು: ಜೀ ಕನ್ನಡದ ‘ಸಾ ರೇ ಗ ಮ ಪ 2026’ ರಿಯಾಲಿಟಿ ಶೋ ಮೂಲಕ ತನ್ನ ವಿಶಿಷ್ಟ ಒಪೆರಾ ಗಾಯನ ಶೈಲಿಯಿಂದ ರಾಜ್ಯದಾದ್ಯಂತ ಗಮನ ಸೆಳೆದಿರುವ ಯುವ ಗಾಯಕಿ ಅನುಷ್ಕಾ ಕಾಗಿನೆರೆ, ಇದೀಗ ಕನ್ನಡ ಚಿತ್ರರಂಗದಲ್ಲಿ ಪ್ಲೇಬ್ಯಾಕ್ ಸಿಂಗರ್ ಆಗಿ ಹೊಸ ಅಧ್ಯಾಯ ಆರಂಭಿಸಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ತಮ್ಮ ಮುಂದಿನ ಬಹುತಾರಾಗಣದ ಕನ್ನಡ ಚಿತ್ರದಲ್ಲಿ ಅನುಷ್ಕಾಗೆ ಹಾಡುವ ಅವಕಾಶ ನೀಡಿದ್ದು, ಈ ಮೂಲಕ ಅವರು ಚಿತ್ರರಂಗಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದ್ದಾರೆ. ಚಿತ್ರದ ಹಾಡಿನ ಧ್ವನಿಮುದ್ರಣ ಈಗಾಗಲೇ ಪೂರ್ಣಗೊಂಡಿದೆ.

ಮಲೆನಾಡಿನ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕಾಗಿನೆರೆ ಮೂಲದ ಅನುಷ್ಕಾ, ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ರಾಜ್ಯವ್ಯಾಪಿ ನಡೆದ ಆಡಿಷನ್‌ಗಳ ಮೂಲಕ ಆಯ್ಕೆಯಾದ 19 ಫೈನಲಿಸ್ಟ್‌ಗಳಲ್ಲಿ ಕಿರಿಯ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅವರು, ಹಳೆ ಮೈಸೂರು ಭಾಗದಿಂದ ಫೈನಲ್‌ಗೆ ತಲುಪಿದ ಏಕೈಕ ಸ್ಪರ್ಧಿ ಕೂಡ ಹೌದು.

ಚಾರ್ಟರ್ಡ್ ಅಕೌಂಟೆಂಟ್ ಹಾಗೂ ನಟ ಆದರ್ಶ್ ಗುಂಡೂರಾಜ್ ಮತ್ತು ಡಾ. ದೀಪಾಶ್ರೀ ಅವರ ಪುತ್ರಿಯಾಗಿರುವ ಅನುಷ್ಕಾ, ಕಳೆದ ಎರಡೂವರೆ ತಿಂಗಳಿನಿಂದ ತನ್ನ ವಿಶಿಷ್ಟ ಗಾಯನದ ಮೂಲಕ ತೀರ್ಪುಗಾರರು ಮತ್ತು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಅವರ ಅದ್ಭುತ ಪ್ರದರ್ಶನಗಳಿಗೆ ಇದುವರೆಗೆ ಐದು ಗೋಲ್ಡನ್ ಬಜರ್‌ಗಳು ಲಭಿಸಿರುವುದು ವಿಶೇಷ.

ಅವರ ಸಂಗೀತ ಪ್ರತಿಭೆಯನ್ನು ಗುರುತಿಸಿದ ಅರ್ಜುನ್ ಜನ್ಯ, ತಮ್ಮ ಹೊಸ ಚಿತ್ರದಲ್ಲಿ ಒಪೆರಾ ಶೈಲಿಯ ವಿಶೇಷ ಭಾಗವನ್ನು ಹಾಡುವ ಜವಾಬ್ದಾರಿ ನೀಡಿದ್ದು, ಅನುಷ್ಕಾ ಅವರ ಚಿತ್ರಗಾಯನ ಪಯಣಕ್ಕೆ ಅದ್ಭುತ ಆರಂಭ ದೊರೆತಿದೆ.

Share This Article